ಪಾಕಿಸ್ತಾನದ ಉಗ್ರ ಸಂಘಟನೆಯಿಂದ ಭಾರತದಲ್ಲಿ ವಿಧ್ವಂಸ ಕೃತ್ಯಕ್ಕೆ ಹೊಂಚು
ನವದೆಹಲಿ: ಹೊಸದಿಲ್ಲಿಯ ಕೆಂಪುಕೋಟೆ ಸಮೀಪ ಸಂಬವಿಸಿದ ಕಾರು ಬಾಂಬ್ ಸ್ಫೋಟ ಕೃತ್ಯ ನೆನಪಿನಿಂದ ಮರೆಯಾಗುವ ಮುನ್ನವೇ ಪಾಕಿಸ್ತಾನ ಮೂಲದ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆ ಕೆಂಪುಕೋಟೆ ಸಮೀಪ ಇನ್ನೊಂದು ಭಾರಿ ಸ್ಫೋಟಕ್ಕೆ ಸಂಚು ರೂಪಿಸಿರುವ ಆಘಾತಕಾರಿ ಅಂಶ ಬಯಲಾಗಿದೆ.
ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆ, ದೆಹಲಿಯ ಕೆಂಪುಕೋಟೆ, ಚಾಂದನಿ ಚೌಕ್ನಲ್ಲಿರುವ ದೇವಾಲಯ ಮತ್ತು ದೇಶಾದ್ಯಂತದ ಇತರ ಪ್ರಮುಖ ದೇವಾಲಯಗಳ ಬಳಿ ಸ್ಫೋಟಕ್ಕೆ ಯೋಜನೆ ರೂಪಿಸುತ್ತಿದೆ ಎಂದು ಭದ್ರತಾ ಸಂಸ್ಥೆಗಳನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.ಎಲ್ಇಟಿಯು ನಿರ್ದಿಷ್ಟ ಸ್ಥಳಗಳಲ್ಲಿ ಐಇಡಿ ದಾಳಿಗೆ ಸಂಚು ರೂಪಿಸುತ್ತಿದೆ. ಫೆಬ್ರವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್ನ ಮಸೀದಿಯಲ್ಲಿ ನಡೆದ ಸ್ಫೋಟಕ್ಕೆ ಪ್ರತೀಕಾರವಾಗಿ, ಈ ಸಂಭಾವ್ಯ ಸ್ಫೋಟವನ್ನು ಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಸ್ಲಾಮಾಬಾದ್ ಮಸೀದಿ ದಾಳಿ ದುರ್ಘಟನೆಯಲ್ಲಿ ಸುಮಾರು 31ಕ್ಕೂ ಹೆಚ್ಚು ಜನರು ಸಾವನ್ನಪ್ಪಿ 160ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಪಾಕಿಸ್ತಾನವು ಈ ದಾಳಿಯಲ್ಲಿ ಭಾರತದ ಕೈವಾಡ ಇದೆ ಎಂದು ಸುಳ್ಳು ಆರೋಪ ಮಾಡಿತ್ತು. ಈಗ ಲಷ್ಕರ್ ಸಂಘಟನೆ ಇದೇ ದಾಳಿಯನ್ನು ನೆಪ ಮಾಡಿಕೊಂಡು ಭಾರತದ ಹಲವು ನಗರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಇಸ್ಲಾಮಾಬಾದ್ ಮಸೀದಿ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿತ್ತು. ದೇವಾಲಯದ ಒಳಗಿನ ದ್ವಾರವನ್ನು ತಲುಪಿದ ನಂತರ, ತನ್ನ ಆತ್ಮಹತ್ಯಾ ದಾಳಿಕೋರ ತನ್ನನ್ನು ತಾನು ಸ್ಫಟಿಸಿಕೊಂಡು ದಾಳಿ ಯೋಜನೆಯನ್ನು ಯಶಸ್ವಿಗೊಳಿಸಿದ್ದಾನೆ ಎಂದು ಐಎಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು.
ಕಳೆದ ವರ್ಷದ ನವೆಂಬರ್ 10ರಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಕಾರು ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದಾಳಿಯಲ್ಲಿ 12 ಜನರು ಸಾವನ್ನಪ್ಪಿ ಸುಮಾರು ಎರಡು ಡಜನ್ಗೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ಪಾಕ್ ಬೆಂಬಲಿತ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.
























