ದೂರು ಕೊಟ್ಟ ಮರುಕ್ಷಣದಲ್ಲೇ ಬಂಧಿಸಿ ಮನೆ ಮೇಲೆ ದಾಳಿ ಮಾಡಿದ ಪೊಲೀಸರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಸೈಟ್ ಕಬಳಿಕೆ ಆರೋಪ ಮಾಡಿದ್ದ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ನೀಡಿದ ದೂರಿನನ್ವಯ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಲಾಗಿದೆ.
ಮುಂಬಡ್ತಿಗಾಗಿ ನಟೇಶ್ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ಗೆ ಒಂದೂವರೆ ಕೋಟಿ ಲಂಚ ನೀಡಿದ್ದಾರೆಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದರು.ಇದರ ಬೆನ್ನಲ್ಲೇ ನಿನ್ನೆ ಮತ್ತೊಂದು ದಾಖಲೆಯನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು. ಇದು ನಕಲಿ ದಾಖಲೆ ಎಂದು ಪೊಲೀಸ್ ಆಯುಕ್ತರಿಗೆ ಮುಡಾ ಮಾಜಿ ಆಯುಕ್ತ ನಟೇಶ್ ದೂರು ನೀಡಿದ್ದರು. ಅದರಂತೆ ಅರೆಸ್ಟ್ ಮಾಡಲಾಗಿದೆ.
ಸ್ನೇಹಮಯಿ ಕೃಷ್ಣ ನಕಲಿ ಆಡಿಯೋ, ನಕಲಿ ವಿಡಿಯೋ ಸೃಷ್ಟಿಸಿ ಆರೋಪ ಮಾಡಿದ್ದಾರೆಂದು ನಟೇಶ್ ದೂರು ನೀಡಿದ್ದರು. ಐಟಿ ಆಕ್ಟ್, ನಕಲಿ ದಾಖಲೆ ಸೃಷ್ಟಿ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಅರೆಸ್ಟ್ ಮಾಡಿ ಬೆಂಗಳೂರಿನ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿಯಲ್ಲಿ ಸ್ನೇಹಮಯಿ ಕೃಷ್ಣನನ್ನು ವಿಚಾರಣೆ ಮಾಡಲಾಗಿದೆ.
ಇತ್ತ ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿ ಬಳಿ ಸ್ನೇಹಮಯಿ ಕೃಷ್ಣ ಪುತ್ರ ವಿವೇಕ್ ಆಗಮಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅರೆಸ್ಟ್ ಬಗ್ಗೆ ನಮಗೆ ಯಾವುದೇ ಮಾಹಿತಿ ಮತ್ತು ಕಾರಣ ನೀಡಿಲ್ಲ. ನಮಗೆ ತುಂಬಾ ಆತಂಕವಾಗಿದೆ. ನನ್ನ ತಂದೆಯವರ ಜೀವಕ್ಕೆ ತೊಂದರೆ ಆದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದಿದ್ದಾರೆ.
ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿದ ಬೆನ್ನಲ್ಲೇ ಮೈಸೂರಿನಲ್ಲಿರುವ ಸ್ನೇಹಮಯಿ ಕೃಷ್ಣ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸ್ನೇಹಮಯಿ ಕೃಷ್ಣ ಬಳಸುತ್ತಿದ್ದ ಕಂಪ್ಯೂಟರ್ನಲ್ಲಿ ನೂರಾರು ಆಡಿಯೋ ಸಂದೇಶಗಳು ಸೇವ್ ಆಗಿರುವುದು ಪತ್ತೆಯಾಗಿದೆ. ಕಳೆದ 4 ದಿನಗಳ ಹಿಂದೆ ನಟೇಶ್ ಆರೋಪ ಸಂಬಂಧ 6 ಸೆಕೆಂಡ್ಗಳ ಆಡಿಯೋವೊಂದನ್ನು ರಿಲೀಸ್ ಮಾಡಿದ್ದರು. ಆ ಆಡಿಯೋಗಳ ಬಗ್ಗೆಯೂ ಪೊಲೀಸರು ತಲಾಶ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸ್ನೇಹಮಯಿ ಕೃಷ್ಣ ಅವರ ಪತ್ನಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಸ್ನೇಹಮಯಿ ಕೃಷ್ಣ ಪುತ್ರ ಕೂಡ ಮಾಹಿತಿ ನೀಡಿದ್ದಾರೆ. ಅತ್ತ ಸ್ನೇಹಮಯಿ ಅರೆಸ್ಟ್ ಬಗ್ಗೆ ವಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ.
























