ಈಶ್ವರಮಂಗಲ: ಸಾಂತ್ಯ ಮುಖ್ಯ ರಸ್ತೆಯಿಂದ ಕವಲೊಡೆಯುವ ಪಳನೀರು-ಸಸ್ಪೆಟ್ಟಿ ಮಾರ್ಗದಲ್ಲಿ ಮಾರ್ಗ ಸೂಚಕ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಸ್ಥಳೀಯ ಯುವಕರು ಸಮಾಜಮುಖಿ ಕಾರ್ಯಕ್ಕೆ ಹೊಸ ಅರ್ಥ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ರೈ ಸಾಂತ್ಯ ಅವರು, ಯುವಕರು ತಮ್ಮ ದೈನಂದಿನ ಜೀವನದ ಜವಾಬ್ದಾರಿಗಳ ನಡುವೆಯೂ ಸಮಾಜದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಗ್ರಾಮಾಭಿವೃದ್ಧಿಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು.
ಬಾಲಮುರಳಿ ಸಸ್ಪೆಟ್ಟಿ ಅವರು ಮಾತನಾಡಿ, ಇಂದಿನ ಯುವಕರು ಅತಿಯಾದ ಮೊಬೈಲ್ ಬಳಕೆಯಿಂದ ದಿಕ್ಕುತಪ್ಪುತ್ತಿರುವ ಸಂದರ್ಭದಲ್ಲಿ, ಇಂತಹ ಕಾರ್ಯಗಳು ಅವರಿಗೆ ಸರಿಯಾದ ದಾರಿ ತೋರಿಸುತ್ತಿವೆ. ಈಶ್ವರಮಂಗಲ ದೇವರ ಅವಭೃತ ಸ್ನಾನದ ಪವಿತ್ರ ಸಂದರ್ಭದಲ್ಲಿ ಈ ನಾಮಫಲಕ ಅನಾವರಣಗೊಂಡಿರುವುದು ವಿಶೇಷವಾಗಿದ್ದು, ದೇವರ ಅನುಗ್ರಹವೇ ಆಗಿದೆ ಎಂದು ಹೇಳಿದರು.
ವಿಕ್ರಮ್ ರೈ ಸಾಂತ್ಯ ಅವರು ಮಾತನಾಡಿ, ರಸ್ತೆಗಳಿಗೆ ನಾಮಫಲಕ ಅಳವಡಿಸುವುದರಿಂದ ಪರವೂರಿನಿಂದ ಬರುವ ಜನರಿಗೆ ಮಾರ್ಗದರ್ಶನ ಸಿಗುತ್ತದೆ. ಇಂತಹ ಮಾರ್ಗ ಸೂಚಕ ಫಲಕಗಳನ್ನು ಎಲ್ಲ ರಸ್ತೆಗಳಲ್ಲೂ ಅಳವಡಿಸಲು ಇದು ಪ್ರೇರಣೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರವೀಣ ಪೂಜಾರಿ ಪಳನೀರು, ವೆಂಕಪ್ಪ ನಾಯ್ಕ ಸಸ್ಪೆಟ್ಟಿ, ಚಂದ್ರಶೇಖರ ಸಸ್ಪೆಟ್ಟಿ, ಅನಿಲ್ ಪಳನೀರು, ಗುರುಪ್ರಸಾದ್ ಪಳನೀರು, ತುಷಾರ್ ಸಸ್ಪೆಟ್ಟಿ, ಚಿದಾನಂದ ಆಚಾರ್ಯ ಸಸ್ಪೆಟ್ಟಿ ಸೇರಿದಂತೆ ಹಲವರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
























