ಕಾರು, ಮಾರಕಾಸ್ತ್ರ ಸೇರಿ 5.38 ಲ.ರೂ. ಮೌಲ್ಯದ ಸೊತ್ತು ವಶ
ಪುತ್ತೂರು : ಎಂಡಿಎಂಎ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕೇರಳ ಮೂಲದ ಮೂವರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂದಿಸಿದ್ದಾರೆ. ಕೇರಳದ ಕೋಝಿಕೋಡ್ನ ಮುಹಮ್ಮದ್ ಅಜ್ಮಲ್ ಸಿ. ಯಾನೆ ಅಜ್ಜು (30), ವಯನಾಡ್ ಜಿಲ್ಲೆಯ ಇಸ್ಮಾಯಿಲ್ (28), ಕೊಝಿಕೋಡ್ನ ಸಂಶೀರ್ (27) ಬಂಧಿತ ಆರೋಪಿಗಳು.
ಆರೋಪಿಗಳು ಫೆ.18ರಂದು ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ವಾಹನದಲ್ಲಿ ಮಾರಾಕಾಯುಧ ತಲವಾರನ್ನು ಇಟ್ಟುಕೊಂಡು, ಸುಮಾರು 5,38,800 ಮೌಲ್ಯದ 53.58 ಗ್ರಾಂ ಎಂಡಿಎಂಎ ಮಾದಕವಸ್ತು ಸಾಗಾಟ ಮಾಡುತ್ತಿದ್ದರು. ಆರೋಪಿಗಳಿಂದ ಒಂದು ಕಾರು, ಮಾರಕಾಸ್ತ್ರ, ಮೊಬೈಲ್ಗಳು ಹಾಗೂ 10,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 25/2026 ಕಲಂ 8C, 22(C), 29 NDPS Act 1985 & ಕಲಂ: 25(1B)(B) Arms Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಆರೋಪಿಗಳು ಕೇರಳ, ಗೋವಾ, ಹಾಗೂ ಕರ್ನಾಟಕಕ್ಕೆ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಕೇರಳದ ಕೋಝಿಕೋಡು, ಕಣ್ಣೂರು, ವಯನಾಡ್ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಬಹಳ ಸಮಯದಿಂದ ತಲೆಮರೆಸಿಕೊಂಡಿದ್ದರು.
ಮುಹಮ್ಮದ್ ಅಜ್ಮಲ್ ಸಿ ಯಾನೆ ಅಜ್ಜು ಇತ್ತೀಚೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಅ.ಕ್ರ: 04/2026 ಕಲಂ 8C, 21(b), NDPS Act 1985ರ ಪ್ರಕರಣದ ಆರೋಪಿಯಾಗಿರುತ್ತಾನೆ. ಅಜ್ಮಲ್ ಸಹಚರನಾದ ಇಸ್ಮಾಯಿಲ್ನ ಮೇಲೆ ಕೂಡ ಕೇರಳದ ಕೋಝಿಕೋಡು ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟದ ಪ್ರಕರಣ ದಾಖಲಾಗಿದೆ.
ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ದ.ಕ ಜಿಲ್ಲಾ ಡಿ.ಎಸ್.ಬಿ ವಿಭಾಗದ ಪೊಲೀಸ್ ನಿರೀಕ್ಷಕ ನಂದ ಕುಮಾರ್, ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಗುಣಪಾಲ ಹಾಗೂ ಸುಶ್ಮಾ ಜೆ ಭಂಡಾರಿ ಹಾಗೂ ವಿಶೇಷ ತಂಡದ ಸಿಬ್ಬಂದಿ ಅದ್ರಾಮ, ಪ್ರಶಾಂತ್ ರೈ, ಪ್ರಶಾಂತ್ ಎಂ, ಪ್ರವೀಣ್ ರೈ, ಹರ್ಷಿತ್, ಹಾಗೂ ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂದಿ ಪರಮೇಶ್ವರ ಗೌಡ, ಹರೀಶ್, ಸುಬ್ರಹ್ಮಣ್ಯ, ಬೀಮಸೇನ್, ಭವಿತ್ ರೈ, ನಾಗಾರಾಜ್, ಕಾರ್ತಿಕ್ ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ದಿವಾಕರ್, ಸಂಪತ್ ಮತ್ತು ಗೃಹ ರಕ್ಷಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ.
























