ವಿಜಯಪುರ: ವೈದ್ಯರು ಮತ್ತು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬಾಣಂತಿ ಮತ್ತು ಮಗು ಮೃತಪಟ್ಟ ಘಟನೆ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಢಳವಾರ ಗ್ರಾಮದ ಮೈತ್ರಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಸಿಂದಗಿಯ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ಇದ್ದ ಕಾರಣ ನರ್ಸ್ ಮತ್ತು ಇನ್ನಿಬ್ಬರು ಸಿಬ್ಬಂದಿ ಸೇರಿ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಗು ಮೃತಪಟ್ಟಿದ್ದು, ಮೈತ್ರಾಗೆ ತೀವ್ರ ಪ್ರಮಾಣದಲ್ಲಿ ರಕ್ತಸ್ರಾವ ಆಗಿದೆ.
ಭಯಗೊಂಡ ಸಿಬ್ಬಂದಿ ತಕ್ಷಣವೇ ಆಕೆಯನ್ನು ವಿಜಯಪುರದ ಬೇರೆ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಆಂಬ್ಯುಲೆನ್ಸ್‌ನಲ್ಲೇ ಮಹಿಳೆ ಮೃತಪಟ್ಚಿದ್ದಾರೆ.
ಬಾಣಂತಿ ಮತ್ತು ಮಗುವಿನ ಸಾವಿಗೆ ಆಸ್ಪತ್ರೆಯೇ ಹೊಣೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
























