ಮಾನವ ಕಲ್ಯಾಣಕ್ಕೆ ಕೃತಕ ಬುದ್ಧಿಮತ್ತೆ ಬಳಕೆ : ನರೇಂದ್ರ ಮೋದಿ ಪ್ರತಿಪಾದನೆ

AI ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ MANAV ಸೂತ್ರ ತಿಳಿಸಿದ ಪ್ರಧಾನಿ

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಮಾನವ ಕಲ್ಯಾಣಕ್ಕಾಗಿ ಉಪಯೋಗಿಸುವುದು ಭಾರತದ ಗುರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಇಂದು ನಡೆದ AI ಇಂಪ್ಯಾಕ್ಟ್‌ ಶೃಂಗಸಭೆ 2026ನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಭವಿಷ್ಯದ AI ನೀಲನಕ್ಷೆಯನ್ನು ಸಭೆಯ ಮುಂದೆ ಬಿಚ್ಚಿಟ್ಟರು.

ವಿಶ್ವದ ಯುವಕರು AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ಮತ್ತು ಅದರ ಮಾಲೀಕತ್ವವನ್ನು ಪಡೆದುಕೊಳ್ಳುತ್ತಿರುವ ವೇಗ ನಿಜಕ್ಕೂ ಶ್ಲಾಘನೀಯ. ಭಾರತದಲ್ಲಿ ಆಯೋಜಿಸಿರುವ AI ಶೃಂಗಸಭೆಯ ಬಗ್ಗೆ ಯುವಜನರಲ್ಲಿ ಅಪಾರ ಉತ್ಸಾಹವಿರುವುದನ್ನು ನಾನು ನೋಡಿದ್ದೇನೆ ಎಂದು ಪ್ರಧಾನಿ ಮೋದಿ ಉದ್ಘಾಟನಾ ಭಾಷಣದಲ್ಲಿ ಹೇಳಿದರು.





















































 
 

AI ಯಂತ್ರಗಳನ್ನು ಹೆಚ್ಚು ಬುದ್ಧಿವಂತವಾಗಿಸುತ್ತದೆ. ಆದರೆ ಅದಕ್ಕೆ ಸಮನಾಗಿ ಮಾನವ ಸಾಮರ್ಥ್ಯಗಳನ್ನೂ ಹೆಚ್ಚಿಸುತ್ತದೆ. AI ತಂತ್ರಜ್ಞಾನದ ಬೆಳವಣಿಗೆಯ ವೇಗ ಅಭೂತಪೂರ್ವವಾಗಿದ್ದು, ಈ ಪ್ರಮಾಣ ನಿಜಕ್ಕೂ ಅನಿರೀಕ್ಷಿತವಾಗಿದೆ. ಹಿಂದೆ ತಂತ್ರಜ್ಞಾನದ ಪ್ರಭಾವವು ಗೋಚರಿಸಲು ದಶಕಗಳೇ ಬೇಕಾಗುತ್ತಿದ್ದವು. ಇಂದು ಯಂತ್ರ ಕಲಿಕೆಯಿಂದ ಕಲಿಕಾ ಯಂತ್ರಗಳವರೆಗಿನ ಅಭಿವೃದ್ಧಿ ಪ್ರಯಾಣ ಭಾರಿ ವೇಗವಾಗಿ ಮತ್ತು ಆಳವಾಗಿ ಹಾಗೂ ವಿಶಾಲವಾಗಿ ಹರಡಿಕೊಂಡಿದೆ ಎಂದು ಮೋದಿ ಹೇಳಿದರು.

ಭಾರತವು ವಿಶ್ವದ ಅತಿದೊಡ್ಡ ತಂತ್ರಜ್ಞಾನ ಪೂಲ್‌ನ ಕೇಂದ್ರವಾಗಿದೆ. ಭಾರತದಲ್ಲಿ AI ಶೃಂಗಸಭೆಯನ್ನು ಆಯೋಜಿಸುತ್ತಿರುವುದು ಜಾಗತಿಕ ದಕ್ಷಿಣಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಶೃಂಗಸಭೆ ಕೇವಲ AI ತಂತ್ರಜ್ಞಾನದ ಅಭಿವೃದ್ಧಿ ಮಾತ್ರವಲ್ಲದೆ, ಮಾನವ ಕಲ್ಯಾಣಕ್ಕಾಗಿ AI ತಂತ್ರಜಾನದ ಬಳಕೆಯ ಕುರಿತ ಭಾರತದ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಸಾರಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಭಾರತದಲ್ಲಿ AI ಪರಿಸರ ವ್ಯವಸ್ಥೆ ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿದ್ದು, ಭಾರತವು ಹೊಸ ತಂತ್ರಜ್ಞಾನವನ್ನು ನಿರ್ಮಿಸುವುದಷ್ಟೆ ಅಲ್ಲದೆ ಅದನ್ನು ವೇಗವಾಗಿ ಅಳವಡಿಸಿಕೊಳ್ಳುತ್ತದೆ. ನಮ್ಮ ಮೇಕ್‌ ಇನ್‌ ಇಂಡಿಯಾ ಯೋಜನೆ AI ತಂತ್ರಜ್ಞಾನದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದು, ಇದರ ಪ್ರತಿಫಲವನ್ನು ಇಡೀ ಜಗತ್ತಿಗೆ ಉಣಬಡಿಸುವುದೇ ನಮ್ಮ ಗುರಿ ಎಂದರು.

M- Moral (ನೈತಿಕ) A-(Accountable-ಉತ್ತರದಾಯಿತ್ವ) N-National Sovereignty (ರಾಷ್ಟ್ರೀಯ ಸಾರ್ವಭೌಮತ್ವ) A-Accessible and inclusive (ಒಳಗೊಳ್ಳುವಿಕೆ) V-Valid and Legitimate (ಮಾನ್ಯತೆ ಮತ್ತು ಕಾನೂನುಬದ್ಧ) ಎಂಬ MANAV ಸೂತ್ರವನ್ನು ಮೋದಿ ಪ್ರತಿಪಾದಿಸಿದರು. ಭಾರತದ ಈ MANAV ದೃಷ್ಟಿಕೋನವು 21ನೇ ಶತಮಾನದ AI ಆಧಾರಿತ ಜಗತ್ತಿನಲ್ಲಿ, ಮಾನವೀಯತೆಯ ಕಲ್ಯಾಣಕ್ಕೆ ಒಂದು ಪ್ರಮುಖ ಕೊಂಡಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

error: Content is protected !!
Scroll to Top