ತಾನು ಸತ್ತರೆ ಪತ್ನಿ ಅನಾಥಳಾಗುತ್ತಾಳೆ ಎಂದು ಕೃತ್ಯ
ಬೆಂಗಳೂರು: ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ಪತ್ನಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಟವಲ್‌ನಿಂದ ಕತ್ತು ಬಿಗಿದು ನಾಗೇಶ್ವರ್ ರಾವ್ ಎಂಬಾತ (75) ಪತ್ನಿ ಸಂಧ್ಯಾ (65) ಅವರನ್ನು ಕೊಲೆ ಮಾಡಿದ್ದಾನೆ.
ಮೂರು ವರ್ಷಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ವಾಸವಿದ್ದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್ ರಾವ್ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದ. ತಾನು ಆತ್ಮಹತ್ಯೆ ಮಾಡಿದರೆ ಪತ್ನಿ ಒಂಟಿಯಾಗುತ್ತಾಳೆ. ಆಕೆಯನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಎಂದು ತೀರ್ಮಾನಿಸಿ ಪತ್ನಿಯನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದ.
ಬುಧವಾರ ಬೆಳಗ್ಗೆ 11 ಗಂಟೆಗೆ ಟವಲ್‌ನಿಂದ ಕತ್ತು ಬಿಗಿದು ಪತ್ನಿಯನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಧೈರ್ಯ ಸಾಲದೆ ಕಿರುಚಿಕೊಂಡು ಹೊರಗೆ ಬಂದಿದ್ದಾನೆ. ಅಕ್ಕಪಕ್ಕದ ನಿವಾಸಿಗಳು ಬಂದು ನೋಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಸಂಧ್ಯಾ ಮೃತದೇಹವನ್ನು ಈಸ್ಟ್ ಪಾಯಿಂಟ್ ಕಾಲೇಜಿಗೆ ಕಳುಹಿಸಲಾಗಿದೆ. ಪುತ್ರಿ ವಿದೇಶದಲ್ಲಿದ್ದು ಆಕೆಗೆ ಮಾಹಿತಿ ತಿಳಿಸಲಾಗಿದೆ. ಅವಲಹಳ್ಳಿ ಪೊಲೀಸ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ನಾಗೇಶ್ವರ್ ರಾವ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
























