ಟಿ20 ವಿಶ್ವಕಪ್‌ : ಸಂಭ್ರಮಕ್ಕಿಂತ ಕಳವಳ ಹುಟ್ಟಿಸಿದ ನಾಲ್ಕನೇ ಗೆಲುವು

ದುರ್ಬಲ ನೆದರ್ಲ್ಯಾಂಡ್ಸ್ ವಿರುದ್ಧ ಬರೀ 17 ರನ್‌ಗಳಿಂದ ಗೆದ್ದ ಟೀಂ ಇಂಡಿಯಾ

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ರಾತ್ರಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ವಿಶ್ವಕಪ್​ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೀ 17 ರನ್​ಗಳಿಂದ ಗೆದ್ದಿರುವುದು ಕ್ರಿಕೆಟ್‌ ಪ್ರೇಮಿಗಳಲ್ಲಿ ಆತಂಕವುಂಟು ಮಾಡಿದೆ. ನೆದರ್ಲ್ಯಾಂಡ್ಸ್‌ನಂಥ ದುರ್ಬಲ ತಂಡದ ಎದುರು ಚಾಂಪಿಯನ್‌ ತಂಡವೊಂದು ಆಡುವ ಆಟ ಇದಾಗಿರಲಿಲ್ಲ.

ಭಾರತ ಸತತ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಅಜೇಯ ಓಟವನ್ನೇನೋ ಮುಂದವರೆಸಿದೆ. ಇನ್ನಿರುವುದು ಸೂಪರ್‌ 8ರ ಘಟ್ಟದ ಆಟ. ಇಲ್ಲಿರುವುದು ಎಲ್ಲ ಬಲಿಷ್ಠ ತಂಡಗಳೇ. ಇಂಥ ತಂಡಗಳ ಎದುರು ಟೀಂ ಇಂಡಿಯಾ ಹುಡುಗರು ಈ ರೀತಿ ಬೇಜವಾಬ್ದಾರಿ ಆಟ ಆಡಿದರೇ ಹೇಗೆ ಎಂಬ ಕಳವಳ ಕ್ರಿಕೆಟ್‌ ಪ್ರೇಮಿಗಳದ್ದು.





















































 
 

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಶಿವಂ ದುಬೆ ಅವರ ಅರ್ಧಶತಕದ ನೆರವಿನಿಂದ 193 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡರೂ ಭಾರತದ ಬೌಲರ್​ಗಳ ಎದುರು ಹೋರಾಟದ ಪ್ರದರ್ಶನ ನೀಡಿ 176 ರನ್ ಕಲೆಹಾಕಲು ಶಕ್ತವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 193 ರನ್ ಗಳಿಸಿತು. ತಂಡದ ಪರ ಅಮೋಘ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಿವಂ ದುಬೆ ಕೇವಲ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಬೃಹತ್ ಸಿಕ್ಸರ್‌ಗಳೊಂದಿಗೆ 66 ರನ್ ಕಲೆಹಾಕಿದರು. ಅವರೊಂದಿಗೆ ನಾಯಕ ಸೂರ್ಯಕುಮಾರ್ ಯಾದವ್ (34), ತಿಲಕ್ ವರ್ಮಾ (31), ಮತ್ತು ಹಾರ್ದಿಕ್ ಪಾಂಡ್ಯ (30) ಉಪಯುಕ್ತ ಕಾಣಿಕೆ ನೀಡಿದರು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಮ್ಮೆ ಶೂನ್ಯಕ್ಕೆ ಔಟಾಗಿ ಬೇಡದ ವಿಶ್ವದಾಖಲೆಗೆ ಕೊರಳೊಡ್ಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಈ ಬೃಹತ್ ಗುರಿ ಬೆನ್ನಟ್ಟಲು ಮೈದಾನಕ್ಕೆ ಇಳಿದ ನೆದರ್ಲ್ಯಾಂಡ್ಸ್ ತಂಡ ಕೂಡ ದಿಟ್ಟ ಹೋರಾಟ ನೀಡಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 176 ರನ್‌ಗಳಿಸಿತು. ತಂಡದ ಪರ ಬಾಸ್ ಡಿ ಲೀಡೆ (33) ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಉಳಿದ ಬ್ಯಾಟರ್​ಗಳು ಕೂಡ ಹೋರಾಟದ ಇನ್ನಿಂಗ್ಸ್ ಆಡಿದರು. ಭಾರತ ಪರ ಮಿಂಚಿದ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಶಿವಂ ದುಬೆ ಬೌಲಿಂಗ್​ನಲ್ಲೂ 2 ವಿಕೆಟ್ ಪಡೆದರು. ಉಳಿದಂತೆ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್‌ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗುಂಪು ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಈಗ ಸೂಪರ್ 8 ಸುತ್ತಿನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಅಭಿಷೇಕ್‌ ಶರ್ಮಾ ಡಕ್‌ ಔಟ್‌ ದಾಖಲೆ

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಚೊಚ್ಚಲ ಟಿ20 ವಿಶ್ವಕಪ್ ದುಃಸ್ವಪ್ನದಂತೆ ಕಾಡಲಾರಂಭಿಸಿದೆ. ಈ ಪಂದ್ಯಾವಳಿಯಲ್ಲಿ ಇದುವರೆಗೆ 3 ಪಂದ್ಯಗಳನ್ನಾಡಿರುವ ಅಭಿಷೇಕ್​ಗೆ ರನ್‌ ಖಾತೆ ತೆರೆಯಲು ಕೂಡ ಸಾಧ್ಯವಾಗಿಲ್ಲ. ಇದು ತಂಡಕ್ಕೆ ದೊಡ್ಡ ತಲೆನೋವು ನೀಡಲಾರಂಭಿಸಿದೆ.

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಬ್ಯಾಟಿಂಗ್​ನಲ್ಲಿ ರನ್ ಮಳೆ ಹರಿಸುತ್ತಿದ್ದ ಅಭಿಷೇಕ್ ಅವರಿಂದ ಟಿ20 ವಿಶ್ವಕಪ್​ನಲ್ಲೂ ಅದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಮೊದಲ ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ ಸತತ ಮೂರು ಪಂದ್ಯಗಳಲ್ಲಿ ಮೂರು ಬಾರಿ ಡಕ್ ಔಟ್ ಆಗುವ ಮೂಲಕ ಬೇಡದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಡಕ್ ಔಟ್ ಆದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಯುಎಸ್ಎ, ನಂತರ ಪಾಕಿಸ್ತಾನ ಮತ್ತು ಈಗ ನೆದರ್‌ಲ್ಯಾಂಡ್ಸ್ ವಿರುದ್ಧ ಅಭಿಷೇಕ್ ಡಕ್ ಔಟ್ ಆಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಒಟ್ಟಾರೆ ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಐದು ಬಾರಿ ಸೊನ್ನೆಗೆ ಔಟಾಗಿದ್ದಾರೆ. ಇದು ಹೀಗೆ ಮುಂದುವರಿದರೆ ಇದು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸುವುದಲ್ಲದೆ, ಅಭಿಷೇಕ್‌ಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಅಭಿಷೇಕ್ ಶರ್ಮಾ 38 ಟಿ20 ಇನ್ನಿಂಗ್ಸ್‌ಗಳಲ್ಲಿ ಆರು ಬಾರಿ 0 ಕ್ಕೆ ಔಟಾದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಮೂಲಕ 54 ಇನ್ನಿಂಗ್ಸ್‌ಗಳಲ್ಲಿ ಐದು ಬಾರಿ ಸೊನ್ನೆಗೆ ಔಟಾಗಿರುವ ಕೆ.ಎಲ್ ರಾಹುಲ್ ಅವರನ್ನು ಅಭಿಷೇಕ್ ಹಿಂದಿಕ್ಕಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಇದುವರೆಗೆ ಆಡಿರುವ 124 ಟಿ20 ಇನ್ನಿಂಗ್ಸ್​ನಲ್ಲಿ 10 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

error: Content is protected !!
Scroll to Top