ಕೊಲೆ, ಗ್ಯಾಂಗ್‌ರೇಪ್, ದರೋಡೆ ಸೇರಿ 26 ಪ್ರಕರಣಗಳಲ್ಲಿ ಭಾಗಿ
ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ 26 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು 9 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಳೆಯಂಗಡಿಯ ಕೊಪ್ಪಳ ಹೌಸ್‌ನ ಸಫ್ವಾನ್ ಹುಸೈನ್ (42) ಬಂಧಿತ ಆರೋಪಿ.
ಆರೋಪಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕೊಲೆ, 4 ಕೊಲೆಯತ್ನ, ಗ್ಯಾಂಗ್‌ರೇಪ್, 5 ದರೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಜೈಲಿನಲ್ಲಿ ಸಹಕೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ತಯಾರಿ ಮತ್ತು ಸಂಚು ಮುಂತಾದ ಅಪರಾಧಗಳಿಗೆ ಸಂಬಂಧಿಸಿದ ಸುಮಾರು 31 ಪ್ರಕರಣಗಳಲ್ಲಿ ಭಾಗಿಯಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2008 ರಲ್ಲಿ ದಾಖಲಾಗಿದ್ದ ಪ್ರವೀಣ್ ಎಂಬವರ ಅಪಹರಣ, ದರೋಡೆ ಮತ್ತು ಕೊಲೆ ಪ್ರಕರಣ ಸಂಬಂಧಿಸಿ 2020ರ ಫೆ.28ರಂದು ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ದರೋಡೆ ಪ್ರಕರಣ ಸಂಬಂಧ ನ್ಯಾಯಾಲಯ 3 ವರ್ಷ ಶಿಕ್ಷೆ ವಿಧಿಸಿರುತ್ತದೆ. ಈತನ ವಿರುದ್ಧ 12 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇದ್ದು, ನ್ಯಾಯಾಲಯದಿಂದ ದಸ್ತಗಿರಿ ವಾರೆಂಟ್‌ಗಳನ್ನು ಹೊರಡಿಸಲಾಗಿದೆ. 5 ಪ್ರಕರಣಗಳಲ್ಲಿ ನ್ಯಾಯಾಲಯ ಎಲ್.ಪಿ.ಸಿ ಎಂದು ಘೋಷಿಸಿದೆ.
2017ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನು ತನ್ನ ಸಹಚರರೊಂದಿಗೆ ಸೇರಿಕೊಂಡು ಲೆಕ್ಕಿ ಸಹ್ವಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ, ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ನೇರ ಭಾಗಿಯಾಗಿ ಬಳಿಕ ತಲೆಮರೆಸಿಕೊಂಡಿದ್ದನು. ಬಳಿಕ ಆಂಧ್ರಪ್ರದೇಶದ ರಾಯ್‌ಚೋಟೆ ಪ್ರದೇಶದಲ್ಲಿ ತನ್ನ ಹೆಸರನ್ನು ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಬದಲಿಸಿ, ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಮಾಡಿಸಿಕೊಂಡು 2018ರಿಂದ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದನು. ವಿದೇಶಗಳಲ್ಲಿನ ಮಂಗಳೂರು ಮೂಲದ ವಾಪಾರಿಗಳಿಗೆ ಹಣಕ್ಕಾಗಿ ಬೆದರಿಕೆ ಕರೆ ಮಾಡುತ್ತಿದ್ದನು.
ಅವನನ್ನು ಮಂಗಳೂರು ಸಿಸಿಬಿ ಪೊಲೀಸರು ಆಂಧ್ರಪ್ರದೇಶದ ರಾಯಚೋಟೆಯಿಂದ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮೂಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಅವನಿಗೆ ತಲೆಮರೆಸಿಕೊಳ್ಳಲು. ನಕಲಿ ದಾಖಲೆ, ಪಾಸ್‌ಪೋರ್ಟ್ ತಯಾರಿಸಲು ಸಹಕರಿಸಿದ ಮತ್ತು ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ ತನಿಖೆಗೆ ಒಳಪಡಿಸಲಾಗುವುದು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
























