ಕೊಪ್ಪಳ: ಅಮೆರಿಕ ಮೂಲದ ಪ್ರವಾಸಿಗನ ಕೊಲೆ, ಇಸ್ರೇಲ್ ಮತ್ತು ಭಾರತ ಮೂಲದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಂಗಾವತಿಯ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಗಳಾದ ಮಲ್ಲೇಶ್ ಯಾನೆ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪನಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿದಿರುವುದಾಗಿದೆ.
ಕಳೆದ ಫೆ. 6 ರಂದು ಈ ಮೂವರು ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿತ್ತು. ಇದೀಗ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಇಂತಹ ಕುಕೃತ್ಯಗಳನ್ನು ಎಸಗುವವರಿಗೆ ಉಳಿಗಾಲ ಇಲ್ಲ ಎನ್ನುವ ಸಂದೇಶವನ್ನು ಕೋರ್ಟ್ ಸಾರಿದಂತಿದೆ.
ಆನೆಗೊಂದಿಯ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದ ಐವರು ಪ್ರವಾಸಿಗರು ರಾತ್ರಿ ಊಟದ ಬಳಿಕ ಸುತ್ತಾಟಕ್ಕೆಂದು ತುಂಗಭದ್ರಾ ಎಡ ದಂಡೆಯ ಬಳಿ ಸಂಗೀತ ಆಲಿಸುತ್ತಾ ಕೂತಿದ್ದರು. ಆ ವೇಳೆ ಕಳ್ಳತನದ ಉದ್ದೇಶದಿಂದ ಮೂವರು ಆರೋಪಿಗಳು ಬಂದು ಗಲಾಟೆ ನಡೆಸಿದ್ದರು. ಜೊತೆಗೆ ಮದ್ಯದ ಅಮಲಿನಲ್ಲಿದ್ದ ಅವರು ಮೂವರು ಪುರುಷರ ಮೇಲೆ ಹಲ್ಲೆ ನಡೆಸಿ ಕಾಲುವೆಗೆ ತಳ್ಳಿದ್ದರು. ಪರಿಣಾಮ ಅದರಲ್ಲಿ ಓರ್ವನ ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಮೃತಪಟ್ಟಿದ್ದರೆ, ಇಬ್ಬರು ಬದುಕುಳಿದಿದ್ದರು. ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು.
ಈ ಘಟನೆ ಹಂಪಿಯತ್ತ ಪ್ರವಾಸಿಗರು ಹೋಗಲು ಯೋಚನೆ ಮಾಡುವಂತೆ ಮಾಡಿತ್ತು. ಇದೀಗ ಆ ಪ್ರಕರಣದ ಮೂವರು ಆರೋಪಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯವನ್ನು ಎತ್ತಿ ಹಿಡಿದಿದೆ.
























