ಏಷ್ಯಾದ ಜನರಿಗಿಲ್ಲ ಗ್ರಹಣ ವೀಕ್ಷಿಸುವ ಅವಕಾಶ
ನವದೆಹಲಿ: ಅಪರೂಪದ ಖಗೋಳ ವಿದ್ಯಮಾನಕ್ಕೆ ಜಗತ್ತು ಇಂದು ಸಾಕ್ಷಿಯಾಗಲಿದೆ. ಇಂದು ಅಪರಾಹ್ನ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಜಗತ್ತಿನ ಹಲವೆಡೆ ರಿಂಗ್ ಆಫ್ ಫೈರ್ ಎಂಬ ಈ ಅದ್ಭುತ ದೃಶ್ಯ ಗೋಚರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಮಧ್ಯಾಹ್ನ 3.26ಕ್ಕೆ ಆರಂಭವಾಗಿ ಸಂಜೆ 7.57ಕ್ಕೆ ಮುಕ್ತಾಯಗೊಳ್ಳುತ್ತದೆ. ಒಟ್ಟು ಸುಮಾರು 4 ಗಂಟೆ 32 ನಿಮಿಷಗಳ ಕಾಲ ಈ ಗ್ರಹಣ ಇರಲಿದೆ.
ಗ್ರಹಣದ ಗರಿಷ್ಠ ಹಂತ ಸಂಜೆ 5.42ರ ಸುಮಾರಿಗೆ ಸಂಭವಿಸಲಿದೆ. ಈ ವೇಳೆ ಚಂದ್ರನು ಸೂರ್ಯನನ್ನು ಸಂಪೂರ್ಣ ಮುಚ್ಚದೆ, ಸೂರ್ಯನ ಅಂಚುಗಳು ಬೆಂಕಿಯ ಉಂಗುರದಂತೆ ಹೊಳೆಯುತ್ತವೆ. ಈ ದೃಶ್ಯವೇ ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುತ್ತದೆ. ಗರಿಷ್ಠ ಹಂತವು ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಮುಂದುವರಿದು, ಬಳಿಕ ಗ್ರಹಣ ಕ್ರಮೇಣ ಕ್ಷೀಣಿಸಿ ಅಂತ್ಯಗೊಳ್ಳುತ್ತದೆ.
ಕಂಕಣ ಸೂರ್ಯಗ್ರಹಣ ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಉಂಟಾಗುತ್ತದೆ. ಆದರೆ ಚಂದ್ರನು ಭೂಮಿಯಿಂದ ಸ್ವಲ್ಪ ದೂರದಲ್ಲಿರುವ ಕಾರಣ ಸೂರ್ಯನಿಗಿಂತ ಸಣ್ಣದಾಗಿ ಕಾಣುತ್ತದೆ. ಈ ಕಾರಣದಿಂದ ಸೂರ್ಯನನ್ನು ಸಂಪೂರ್ಣ ಮುಚ್ಚಲು ಸಾಧ್ಯವಾಗದೆ, ಸೂರ್ಯನ ಸುತ್ತಲೂ ಉಂಗುರದ ಆಕಾರದಲ್ಲಿ ಬೆಳಕು ಕಾಣಿಸುತ್ತದೆ. ಇದೇ ಈ ಗ್ರಹಣದ ವೈಶಿಷ್ಟ್ಯವಾಗಿದ್ದು, ಖಗೋಳಶಾಸ್ತ್ರ ಪ್ರಿಯರಿಗೆ ಅತ್ಯಂತ ಆಕರ್ಷಕ ಕ್ಷಣವಾಗಿರುತ್ತದೆ.
ಆದರೆ ಭಾರತೀಯರಿಗೆ ಈ ಬಾರಿ ಈ ಅದ್ಭುತವನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರೆಯುವುದಿಲ್ಲ. ಭಾರತದಲ್ಲಿಯೂ ಅಲ್ಲದೆ ಏಷ್ಯಾದ ಬಹುತೇಕ ಭಾಗಗಳಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಹೀಗಾಗಿ ದೇಶದಲ್ಲಿ ಸೂತಕ ಅಥವಾ ವಿಶೇಷ ಧಾರ್ಮಿಕ ಆಚರಣೆಗಳ ಅವಶ್ಯಕತೆ ಇರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಗ್ರಹಣವನ್ನು ನೇರಪ್ರಸಾರ ಮಾಡುವ ಸಾಧ್ಯತೆ ಇದೆ. ನಾಸಾದ ಅಧಿಕೃತ ಯೂಟ್ಯೂಬ್ ಚಾನೆಲ್ ಅಥವಾ ಆನ್ಲೈನ್ ವೇದಿಕೆಗಳ ಮೂಲಕ ಈ ಅಪರೂಪದ ದೃಶ್ಯವನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು.
























