ಧಾರವಾಡ: ಮೂರು ಹೆಸರುಗಳ ಮೂಲಕ ಮಹಿಳೆಯೊಬ್ಬಳು ಯುವಕರ ಜೊತೆಗೆ ಪ್ರೀತಿಯ ನಾಟಕವಾಡಿ, ಹಣ ದೋಚುತ್ತಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.
ಆರೋಪಿ ಮಹಿಳೆ ಐಶ್ವರ್ಯ, ರೇಣುಕಾ, ಆರೋಹಿ ಮೊದಲಾದ ಹೆಸರುಗಳಲ್ಲಿ ಯುವಕರನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡುತ್ತಿದ್ದಳು. ಆ ಬಳಿಕ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣ ದೋಚುವ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಅವಳ ಸುಳ್ಳು ಪ್ರೀತಿಯ ಬಲೆಗೆ ಬಿದ್ದ ಗುರು ಎಂಬಾತ ಆಕೆಗೆ 7 ಲಕ್ಷ ರೂ. ಗಳನ್ನು ನೀಡಿದ್ದ. ಹಣ ಕೈ ಸೇರುತ್ತಿದ್ದ ಹಾಗೆ ಮಹಿಳೆ ತನ್ನ ವರಸೆ ಬದಲಿಸಿದ್ದು, ಇದರಿಂದ ಮನನೊಂದ ಗುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆರೋಪಿ ಮಹಿಳೆ ಆತನನ್ನು ನೋಡಲು ಆಸ್ಪತ್ರೆಗೆ ಬಂದಿದ್ದು ಗುರುವಿನ ಮನೆಯವರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮದುವೆಯಾಗುವಂತೆ ಇಲ್ಲವೇ ಕೊಟ್ಟ ಹಣ ವಾಪಸ್ ನೀಡುವಂತೆ ತಾಕೀತು ಮಾಡಿದ್ದಾರೆ.
ಆದರೆ ಮಹಿಳೆಗೆ ಮದುವೆಯಾಗಿ ಒಂದು ಮಗುವೂ ಇದ್ದು, ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಾಗಿ ತಿಳಿದು ಬಂದಿದೆ. ಸದ್ಯ ಗುರು ಕುಟುಂಬದವರು ಆಕೆಯನ್ನು ಶಹರ ಪೊಲೀಸರಿಗೆ ಒಪ್ಪಿಸಿದ್ದು, ಅವರು ತನಿಖೆ ನಡೆಸುತ್ತಿದ್ದಾರೆ.
























