ಸಂವಿಧಾನ ಪೀಠದಲ್ಲಿ ಏ.22ರೊಳಗೆ ಮುಕ್ತಾಯವಾಗಲಿರುವ ವಿಚಾರಣೆ
ನವದೆಹಲಿ: ಶಬರಿಮಲೆ ದೇಗುಲವೂ ಸೇರಿ ಕೆಲ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ನಿರಾಕರಿಸುವ ತಾರತಮ್ಯ ಕುರಿತಾದ ಅರ್ಜಿಗಳ ಅಂತಿಮ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ರಚಿಸಿ ಆದೇಶಿಸಿದೆ.
ಈ ಸಾಂವಿಧಾನಿಕ ಪೀಠ ಏ.7ರಿಂದ ಅರ್ಜಿಗಳ ವಿಚಾರಣೆ ಆರಂಭಿಸಿ ಏ.22ರೊಳಗೆ ಮುಕ್ತಾಯಗೊಳಿಸಲಿದೆ. ಪುನರ್ ಪರಿಶೀಲನೆಯನ್ನು ಬೆಂಬಲಿಸುವವರ ಅರ್ಜಿ ಏ.7ರಿಂದ ಏ.9ರ ನಡುವೆ ವಿಚಾರಣೆಗೆ ಬರಲಿದೆ. ಆ ಬಳಿಕ ಏ.14ರಿಂದ ಏ.16ರವರೆಗೆ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಲಾಗುವುದು. ಪ್ರತ್ಯುತ್ತರ ಸಲ್ಲಿಸಲು ಏ.21ರಂದು ಅವಕಾಶ ಸಲ್ಲಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ.ಜೋಯ್ಮಲ್ಯಾ ಬಗಾಚಿ, ನ್ಯಾ.ವಿಪುಲ್ ಎಂ. ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠ ಹೇಳಿದೆ.
2018ರಲ್ಲಿ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ ಆದೇಶಿಸಿತ್ತು. ಈ ಮೂಲಕ ಶತಮಾನಗಳಿಂದ ಪಾಲಿಸಿಕೊಂಡು ಬಂದಿದ್ದ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ರದ್ದು ಮಾಡಿತ್ತು. ಇದು ಬಾರಿ ವಿವಾದಕ್ಕೊಳಗಾಗಿದ್ದು, ಮಾತ್ರವಲ್ಲದೆ ಹಿಂದೂಗಳ ಧಾರ್ಮಿಕ ಭಾವನೆಯನ್ನು ತೀವ್ರವಾಗಿ ಘಾಸಿಗೊಳಿಸಿತ್ತು.
























