ಅಧ್ಯಕ್ಷ ಮೊಹ್ಸಿನ್ ನಖ್ವಿ ತರಾತರಿಯಿಂದ ಕಾರಿನತ್ತ ಧಾವಿಸುವ ವಿಡಿಯೋ ವೈರಲ್
ಕೊಲಂಬೊ: ಇಲ್ಲಿ ನಡೆದ ಟಿ20 ವಿಶ್ವಕಪ್ ಮ್ಯಾಚ್‌ನಲ್ಲಿ ಭಾರತದ ಎದುರು ಸೋತ ಪಾಕಿಸ್ತಾನ ಮಾಮೂಲಿಯಂತೆ ವಿಪರೀತ ಟ್ರೋಲ್‌ಗೆ ಗುರಿಯಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಭಾರತೀಯರು ಮಾತ್ರವಲ್ಲದೆ ಪಾಕಿಸ್ತಾನಿಯರು ಕೂಡ ಪಾಕಿಸ್ತಾನ ತಂಡವನ್ನು ನಾನಾ ರೀತಿಯಲ್ಲಿ ಲೇವಡಿ ಮಾಡುತ್ತಿದ್ದಾರೆ. ಗ್ರೇಟೆಸ್ಟ್ ರೈವಲ್ರಿ ಎಂದು ಹೇಳಿಕೊಂಡರೂ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ತಂಡದ ಕಡೆಯಿಂದ ಯಾವುದೇ ರೀತಿಯ ಪೈಪೋಟಿ ಕಂಡು ಬರುತ್ತಿಲ್ಲ. ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ 61 ರನ್‌ಗಳ ಅಂತರದಲ್ಲಿ ಹೀನಾಯ ಸೋಲಿಗೆ ತುತ್ತಾಗಿ ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿದೆ.
ಪಾಕಿಸ್ತಾನದ ಮಾಜಿ ಆಟಗಾರ ಧನೇಶ್ ಕನೇರಿಯ ಹೀಗೆ ನಾಚೆಕೆಗೆಟ್ಟು ಸೋಲುವುದಕ್ಕಿಂತ ಪಾಕಿಸ್ತಾನ ಟಿ20 ವಿಶ್ವಕಪ್ ಕೂಟವನ್ನು ಬಹಿಷ್ಕರಿಸಿದ್ದರೆ ಒಳ್ಳೆಯದಿತ್ತು ಎಂದು ಕಾಲೆಳೆದಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನವನ್ನು ಇನ್ನಿಲ್ಲದಂತೆ ಲೇವಡಿ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಭಾರತದ ಗೆಲುವನ್ನು ಸಂಭ್ರಮದಿಂದ ಕೊಂಡಾಡಿರುವುದು ಕಂಡುಬಂದಿದೆ. ಪಾಕ್ ವಿರುದ್ಧ ಟೀಕೆ ಮಾಡುತ್ತಲೇ ಟೀಂ ಇಂಡಿಯಾ ಗೆಲುವನ್ನು ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ವಿಡಿಯೋವೊಂದು ಸಖತ್ ಸದ್ದು ಮಾಡ್ತಿದೆ.
176 ರನ್‌ಗಳ ಸ್ಪರ್ಧಾತ್ಮಕ ರನ್ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ಪವರ್ ಪ್ಲೇನಲ್ಲೇ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು. ಬ್ಯಾಟರ್‌ಗಳಿಗೆ ಮಣ್ಣುಮುಕ್ಕಿಸಿದ ಭಾರತ ರನ್ ಬಿಟ್ಟುಕೊಡದೆ ಹಿಡಿತ ಸಾಧಿಸಿತು. ಮಧ್ಯಮ ಕ್ರಮಾಂಕದ ಆಟಗಾರ ಉಸ್ಮಾನ್ ಖಾನ್ ಸ್ಪರ್ಧಾತ್ಮಕ ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಬಂದ ಕೆಲವೇ ಕ್ಷಣಗಳಲ್ಲಿ ನೆಲ ಕಚ್ಚುತ್ತಿದ್ದರು. ಆದರೆ 12ನೇ ಓವರ್‌ನ 4ನೇ ಎಸೆತದಲ್ಲಿ ಮೊಹಮ್ಮದ್ ನವಾಜ್ ಔಟಾದ ಬಳಿಕ ಪಾಕ್ ಸೋಲು ಸಂಪೂರ್ಣ ಖಚಿತವಾಯಿತು. ಹೀಗಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸ್ಟೇಡಿಯಂನಿಂದ ಕಾಲ್ಕಿತ್ತರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಖ್ವಿ ಸ್ಟೇಡಿಯಂನಿಂದ ಪಂದ್ಯ ಮುಗಿಯುವ ಎದ್ದು ಹೋಗಿ ತನ್ನ ಕಾರಿನತ್ತ ಧಾವಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಘಿದೆ. ತನ್ನ ದೇಶದ ಕ್ರಕೆಟಿಗರನ್ನು ಉತ್ತೇಜಿಸಲೆಂದೇ ನಖ್ವಿ ನಿನ್ನೆ ಕೊಲಂಬೊಗೆ ಹೋಗಿದ್ದರು.
ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ ಮೊಹಮ್ಮದ್ ನವಾಜ್ ದೊಡ್ಡ ಹೊಡೆತಕ್ಕೆ ಯತ್ನಿಸಿದ್ದರು. ಬೌಂಡರಿ ಲೈನ್‌ನಲ್ಲಿ ಶಿವಂ ದುಬೆ ಕ್ಯಾಚ್ ಹಿಡಿಯುವ ಮೂಲಕ ನವಾಜ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ಇದರೊಂದಿಗೆ ಪಾಕ್ 78 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಇನ್ನು ಉಳಿಗಾಲವಿಲ್ಲ ಎಂದು ತಿಳಿದ ಪಾಕ್ ಅಧ್ಯಕ್ಷಾ ಪಂದ್ಯ ಮುಗಿಯುವ ಮೊದಲೇ ಕಾಲ್ಕಿತ್ತರು.
ಭಾರತದ ಬೌಲರ್‌ಗಳ ದಾಳಿಗೆ ತರಗೆಲೆಗಳಂತೆ ಉದುರಿದ ಪಾಕ್ ತಂಡ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು.
























