ಗಾಂಧಿನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ರೈತಾಪಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್ ಮತ್ತು ಐರೋಪ್ಯ ಒಕ್ಕೂಟದ ಜೊತೆಗಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಪಟ್ಟ ಹಾಗೆ ಅವರು ಸುಳ್ಳಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಒಪ್ಪಂದ ದೇಶದ ರೈತರಿಗೆ ಮಾರಕ ಎಂದಿರುವ ರಾಹುಲ್ ಹೇಳಿಕೆ ಹಾಸ್ಯಾಸ್ಪದ. ರಾಹುಲ್ ಸಂಸತ್ತಿನಲ್ಲಿ ರೈತರ ರಕ್ಷಣೆ ಮಾಡುವುದಾಗಿ ಹೇಳುವಾಗ ನಗು ಬರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ರೈತರನ್ನು ತಪ್ಪು ದಾರಿಗೆ ಎಳೆದ ಮತ್ತು ಇಂತಹ ಒಪ್ಪಂದಗಳ ಬಗ್ಗೆ ಸುಳ್ಳುಗಳನ್ನು ಹೇಳುವ ದೊಡ್ಡ ಇತಿಹಾಸವೇ ಇದೆ ಎಂದು ಅವರು ತಿಳಿಸಿದ್ದಾರೆ.
ಈ ಒಪ್ಪಂದಕ್ಕೆ ಸಂಬಂಧಿಸಿದ ಹಾಗೆ ರಾಹುಲ್ ಅವರನ್ನು ಶಾ ಬಹಿರಂಗ ಚರ್ಚೆಗೂ ಆಹ್ವಾನಿಸಿದ್ದಾರೆ. ದೇಶದ ರೈತರ ಕಲ್ಯಾಣಕ್ಕಾಗಿ ದುಡಿದವರು ಯಾರು?, ಯಾರು ಅವರ ಹಿತಾಸಕ್ತಿಗಳಿಗೆ ಅಪಾಯ ಎಸಗಿದ್ದಾರೆ ಎನ್ನುವುದನ್ನು ನಿಮ್ಮ ಜೊತೆಗೆ ಯಾವುದೇ ವೇದಿಕೆಯಲ್ಲಿ ಚರ್ಚೆ ಮಾಡಲು ನಾವು ಸಿದ್ಧ ಎಂದು ಸವಾಲು ಹಾಕಿದ್ದಾರೆ.
























