ಟಿ20 ವಿಶ್ವಕಪ್‌ : ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ

ಬದ್ಧ ಎದುರಾಳಿಗಳನ್ನು ಸೋಲಿಸಲು ಸಜ್ಜಾಗಿರುವ ಉಭಯ ತಂಡ

ಕೊಲಂಬೊ : ಟಿ20 ವಿಶ್ವಕಪ್‌ನಲ್ಲಿ ಇಂದಿನ ಹೈ ವೋಲ್ಟೇಜ್‌ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಹಣಾಹಣಿಗೆ ಭಾರತ ತಂಡ ಸಿದ್ಧವಾಗಿದೆ. ಈ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಮೈದಾನದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್​ 11ನಲ್ಲಿ ಬದಲಾವಣೆಯಾಗುವುದು ಖಚಿತ.

ಭಾರತ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳು ಆಡುವ ಸಾಧ್ಯತೆ ಇದೆ. ಇತ್ತ ಪಾಕಿಸ್ತಾನ ಕೂಡ ಕಳೆದೆರಡು ಪಂದ್ಯಗಳಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಕೊಲಂಬೊ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದ ಅದರ ಲಾಭ ಪಡೆಯಲು ಟೀಂ ಇಂಡಿಯಾ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ಇದರಲ್ಲಿ ಇಬ್ಬರು ಸ್ಪಿನ್ ಆಲ್‌ರೌಂಡರ್​ಗಳಿದ್ದರೆ, ಇನ್ನಿಬ್ಬರು ಪೂರ್ಣ ಪ್ರಮಾಣದ ಸ್ಪಿನ್ನರ್‌ಗಳು ಇರಲಿದ್ದಾರೆ. ಆ ಪ್ರಕಾರ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ಪಾಕ್ ವಿರುದ್ಧ ಆಡಬಹುದು.





















































 
 

ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೀಗ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಷೇಕ್ ಗುಣಮುಖರಾಗಿದ್ದು, ಅವರು ತಂಡದಲ್ಲಿ ಆಡಲಿದ್ದಾರೆ. ನಾಯಕ ಸೂರ್ಯಕುಮಾರ್ ಕೂಡ ಇದನ್ನು ಖಚಿತಪಡಿಸಿದ್ದಾರೆ. ಆ ಪ್ರಕಾರ, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಎಂದಿನಂತೆ ತಿಲಕ್ ವರ್ಮಾ ಬ್ಯಾಟ್ ಬೀಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಬರಲಿದ್ದು, ಮತ್ತೊಬ್ಬ ಆಲ್‌ರೌಂಡರ್ ಶಿವಂ ದುಬೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಕಳೆದೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ರಿಂಕು ಸಿಂಗ್ ಈ ಪಂದ್ಯದಿಂದ ಹೊರಗುಳಿಯಬಹುದು. ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ. ಹಾಗೆಯೇ ವೇಗಿ ಅರ್ಷದೀಪ್ ಸಿಂಗ್ ಬದಲಿಗೆ ಕುಲದೀಪ್ ಯಾದವ್ ಆಡುವ ಸಾಧ್ಯತೆಗಳಿವೆ. ಈ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.

ಎರಡೂ ತಂಡಗಳು ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. ಭಾರತ ಈ ಕ್ರೀಡಾಂಗಣದಲ್ಲಿ 15 ಪಂದ್ಯಗಳನ್ನು ಮತ್ತು ಪಾಕಿಸ್ತಾನ 7 ಪಂದ್ಯಗಳನ್ನು ಆಡಿದೆ. ಈ ಮೈದಾನದಲ್ಲಿ ಭಾರತ ತಂಡ ಒಟ್ಟು 15 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಪಾಕಿಸ್ತಾನ ವಿರುದ್ಧದ ಒಂದು ಪಂದ್ಯವೂ ಸೇರಿದೆ. 2012ರಲ್ಲಿ ನಡೆದ ಆ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಗೆದ್ದಿತ್ತು.

ಪಾಕಿಸ್ತಾನ ಕ್ರಿಕೆಟ್ ತಂಡ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಒಟ್ಟು 7 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ 5 ಪಂದ್ಯಗಳನ್ನು ಗೆದ್ದು 2 ಪಂದ್ಯಗಳಲ್ಲಿ ಸೋತಿದೆ. ಇದರಲ್ಲಿ ಶ್ರೀಲಂಕಾ ವಿರುದ್ಧ 3 ಪಂದ್ಯಗಳು ಮತ್ತು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತಲಾ 1 ಪಂದ್ಯ ಸೇರಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಪರ ಅತಿ ಹೆಚ್ಚು ಟಿ20 ರನ್ ಗಳಿಸಿದ ಆಟಗಾರ (182 ರನ್) ಉಮರ್ ಅಕ್ಮಲ್ ಆಗಿದ್ದರೆ, ಸಯೀದ್ ಅಜ್ಮಲ್ 8 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಸಾಹಿಬ್ಜಾದಾ ಫರ್ಹಾನ್, ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ನಫೆ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಉಸ್ಮಾನ್ ತಾರಿಕ್, ಸೈಮ್ ಅಯೂಬ್, ಶಾಹೀನ್ ಶಾ ಅಫ್ರಿದಿ, ಶಾದಾಬ್ ಖಾನ್.

error: Content is protected !!
Scroll to Top