ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದ ಕಾರು
ಬೆಂಗಳೂರು: ನೆಲಮಂಗಲದ ನವಯುಗ ಟೋಲ್ ಸಮೀಪದ ಫ್ಲೈಓವರ್ ಬಳಿ ಡಿವೈಡರ್ಗೆ ಹಾರಿ ಕೆಎಸ್ಆರ್ಟಿಸಿ ಬಸ್ಗೆ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಯುವಕರು ಮೃತಪಟ್ಟಿದ್ದಾರೆ. ನಡುರಾತ್ರಿ 12 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು, ಬಸ್ ಡ್ರೈವರ್, ಕಂಡೆಕ್ಟರ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೃತರನ್ನು ದೊಡ್ಡಬಳ್ಳಾಪುರದ ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಎಂದು ಗುರುತಿಸಲಾಗಿದೆ. ತುಮಕೂರು ರಸ್ತೆಯಿಂದ ಬೆಂಗಳೂರು ನಗರದ ಕಡೆ ಟಾಟಾ ಇಂಡಿಕಾ ಕಾರಿನಲ್ಲಿ ಯುವಕರು ತೆರಳುತ್ತಿದ್ದರು. ಜಿಂದಾಲ್ ಆಸ್ಪತ್ರೆ ಸಮೀಪ ಓವರ್ ಸ್ಪೀಡ್ನಲ್ಲಿ ಬಂದ ಕಾರು, ಎದುರುಗಡೆಯ ರಸ್ತೆಯಲ್ಲಿ ಬರ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗದ ಗ್ಲಾಸ್ ಪೀಸ್ ಪೀಸ್ ಆಗಿದ್ದು, ಮುಂಭಾಗ ಕೂತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ನಲ್ಲಿದ್ದ 42 ಪ್ರಯಾಣಿಕರು ಅಪಾಯದಿಂದ ಬಚಾವ್ ಆಗಿದ್ದಾರೆ.
ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತದೇಹಗಳನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯ ತಿಳಿದ ಕುಟುಂಬಸ್ಥರು ಆಸ್ಪತ್ರೆಗೆ ಬಂದಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಹರ್ಷಿತ್ ಬೆಂಗಳೂರಿನ ರಾಜನಕುಂಟೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡ್ತಿದ್ದ. ಲಲಿತ್ ಸಿಸಿಟಿವಿ ಅಳವಡಿಕೆ ಕೆಲಸ ಮಾಡ್ತಿದ್ದ. ಈ ಅಪಘಾತ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
























