ಪುತ್ತೂರು: ಬೈಪಾಸ್ ರಸ್ತೆಯಲ್ಲಿನ ರವಿಂದ ಕಾಂಪ್ಲೆಕ್ಸ್ ನಲ್ಲಿ ಪ್ರಥಮ ಬಾರಿಗೆ ಸೈಕಾಲಜಿಸ್ಟ್ ಹಾಗೂ ಶಿಕ್ಷಣ ತಜ್ಞರಿಂದಲೇ ನಡೆಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆಗೊಂಡಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ
ಶ್ರೀ ಜಿತಕಾಮನಂದಜಿ ಉದ್ಘಾಟಿಸಿ ಮಾತನಾಡಿ, ಲಕ್ಷ್ಯ ಡೇ ಕೇರ್ ಒಂದು ವಿನೂತನ ಹೆಜ್ಜೆಯನ್ನು ಇಡುತ್ತಿದೆ. ಮನಃಶಾಸ್ತ್ರದ ಹಾಗೂ ಆತ್ಯಾತ್ಮಿಕ ಹಿನ್ನೆಯಲ್ಲಿ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಜೋಡಿಸಿಕೊಂಡಿರುವುದು ಶ್ಲಾಘನೀಯ ಸಂಗತಿ. ಒಂದು ಮಗುವಿಗೆ ಕೇವಲ ಉತ್ತಮ ಆಹಾರಕ್ರಮ ಮಾತ್ರವೇ ಪರಿಣಾಮವನ್ನು ಬೀರುವುದಿಲ್ಲ. ಮಗುವಿನ ಮಿದುಳಿಗೆ ಸರಿಯಾದ ಪ್ರಮಾಣದಲ್ಲಿ ಜ್ಞಾನಾರ್ಜನೆಯಾಗಬೇಕು. ಆಗ ಮಾತ್ರವೇ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಇದರೊಂದಿಗೆ ಪಾಲಕರು ಕೂಡಾ ಇತ್ತೀಚಿನ ದಿನಗಳಲ್ಲಿ ಮಾರ್ಗದರ್ಶನವನ್ನು ಪಡೆಯಬೇಕಿರುವ ಅಗತ್ಯತೆ ಕಾಣುತ್ತಿದೆ. ಗರ್ಭಾವಸ್ಥೆಯಲ್ಲೇ ಮಗುವಿಗೆ ಸಂಸ್ಕಾರವನ್ನು ಕೊಡಲು ಅವಕಾಶವಿದ್ದು ಅದನ್ನು ಪುತ್ತೂರಿನಲ್ಲೇ ಪಡೆಯಲು ಸಾಧ್ಯವಾಗುವಂತೆ ಲಕ್ಷ್ಯ ತಂಡವು ಮಾಡುತ್ತಿದೆ. ಮಗುವಿನ ಹುಟ್ಟು ಸಂಸ್ಕಾರ ಅದರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.
ಕಲ್ಲಡ್ಕ ಡಾ.ಪ್ರಭಾಕರ ಭಟ್ ಇವರು ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಉದ್ಘಾಟಿಸಿ ಮಾತನಾಡಿ, ಮನಸ್ಸು ಒಂದಿದ್ದರೆ ಏನನ್ನು ಬೇಕಿದ್ದರೂ ಸಾಧಿಸಬಹುದು. ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವಾಗ ನೆಮ್ಮದಿಯ ಮನಸ್ಸಿಲ್ಲದಿದ್ದರೆ ಜೀವನದಲ್ಲಿ ಯಾವುದೂ ಇಲ್ಲವಾದಂತೆ. ಲಕ್ಷ್ಯ ತಂಡವು ಈ ಮೊದಲು ಅನೇಕ ಸಂಶೋಧನೆಯನ್ನು ಮಾಡುತ್ತಾ ಒಂದು ಬಾರಿ ನಮ್ಮ ಬಳಿಗೂ ಬಂದಿದ್ದರು. ದುರ್ಗಾಪರಮೇಶ್ವರ ಭಟ್ಟರಲ್ಲಿ ಶಿಕ್ಷಣದ ಬಗ್ಗೆ ವಿಶೇಷವಾದ ಚಾಕಚಕ್ಯತೆ ಇದೆ. ಶಿಕ್ಷಣ ಕ್ಷೇತ್ರದ ಹಲವಾರು ಸಂಸ್ಯೆಗಳಿಗೆ ಇದೊಂದು ಉತ್ತರವಾಗಬಲ್ಲದು. ತಮ್ಮ ತಾರುಣ್ಯಾವಸ್ಥೆಯಲ್ಲೇ ಬಹುದೊಡ್ಡ ಆಲೋಚನೆಗಳನ್ನು ಹೊಂದಿರುವ ಸಂಸ್ಥೆಯೊಂದನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಎಂದರು.
ಸಂಸ್ಥೆಯ ಉದ್ಘಾಟನಾ ಸಮಾರಂಭವು ಸರಸ್ವತಿ ಪೂಜಾ ಕಾರ್ಯವು ವೇದಮೂರ್ತಿ ಶ್ರೀ ಕೃಷ್ಣ ಕುಮಾರ ಉಪಾಧ್ಯಾಯ ಇವರಿಂದ ನಡೆಯಿತು. ಲಕ್ಷ್ಯ ಸಂಸ್ಥೆಯ ಸಂಸ್ಥಾಪಕ ದುರ್ಗಾಪರಮೇಶ್ವರ ಭಟ ಕಾರ್ಯಕ್ರಮದ ನಿರ್ವಹಣೆ ನಡೆಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸನಾತನ ಸಂಸ್ಕೃತಿ ಬಲವರ್ಧನೆ ಹಿನ್ನಲೆಯಲ್ಲಿ “ ಸಮಾಜ ನಿಧಿ” ಕಾಣಿಕೆಯನ್ನು ಶ್ರೀ ಸುಬ್ರಹ್ಮಣ್ಯ ಭಟ್ ಮಜ್ಜಾರಡ್ಕ ಇವರು ಡಾ. ಪ್ರಭಾಕರ ಭಟ್ ಇವರಿಗೆ ಹಸ್ತಾಂತರ ಮಾಡಿದರು.
ಡೇ ಕೇರ್ ಸೆಂಟರ್ ಮುಖ್ಯ ನಿರ್ವಾಹಕಿ ಅರ್ಪಿತಾ ಎಂ., ನೇತ್ರಪ್ರಭಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು
























