ಮಂಗಳೂರು: ಸಂಸದರ ಜೊತೆಗೆ ಪತ್ನಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ ಮಾಡಿದ್ದ ಗಂಡನಿಗೆ ಜೈಲು ಶಿಕ್ಷೆ

ದಾಂಪತ್ಯ ವಿರಸದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಸಂಸದರ ಚಾರಿತ್ರ್ಯಹನನ ಮಾಡಿದ್ದ ಅಪರಾಧಿ

ಮಂಗಳೂರು: ದಕ್ಷಿಣ ಕನ್ನಡದ ಮಾಜಿ ಸಂಸದರ ಜೊತೆಗೆ ತನ್ನ ಪತ್ನಿಗೆ ಸಂಬಂದ ಕಲ್ಪಿಸಿ ಅಪಪ್ರಚಾರ ಮಾಡಿದ್ದ ದುಷ್ಟ ಪತಿಗೆ ಮಂಗಳೂರಿನ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ಮುಂಬೈಯ ಮಿರಾರೋಡ್‌ ನಿವಾಸಿ ಸತೀಶ್‌ ಶೆಟ್ಟಿ ಶಿಕ್ಷೆಗೊಳಗಾದ ಅಪರಾಧಿ.

ಸತೀಶ್‌ ಶೆಟ್ಟಿಗೆ ಪತ್ನಿ ಜೊತೆ ಮನಸ್ತಾಪ ಇತ್ತು. ಮಕ್ಕಳಾದ ಮೇಲೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತ ಪತ್ನಿ ತವರು ಮನೆಗೆ ಬಂದು ವಾಸವಾಗಿದ್ದು, ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.





















































 
 

ಈ ನಡುವೆ 2014ರ ಮೇ 13ರಂದು ಸತೀಶ್‌ ಶೆಟ್ಟಿ ಟಿವಿ ಚಾನೆಲ್‌ಗಳ ಮುಂದೆ ಬಂದು ತನ್ನ ಪತ್ನಿಗೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಜೊತೆಗೆ ಸಂಬಂಧ ಇದೆ ಎಂದು ಆರೋಪಿಸಿದ್ದನು. ಈ ಸುದ್ದಿ ಕೆಲವು ಪತ್ರಿಗಳಲ್ಲೂ ಪ್ರಕಟವಾಗಿತ್ತು. ಪತ್ನಿ ಮತ್ತು ಸಂಸದರ ಚಾರಿತ್ರ್ಯಹನನ ಮಾಡಿ ಗೌರವಕ್ಕೆ ಕುಂದುಂಟು ಮಾಡಿದ್ದಕ್ಕೆ ಅವನ ವಿರುದ್ಧ ಕೇಸ್‌ ದಾಖಲಾಗಿತ್ತು.

ಮಂಗಳೂರಿನ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರು ಬುಧವಾರ ಈ ಕೇಸಿನ ತೀರ್ಪು ಪ್ರಕಟಿಸಿದ್ದು, ಸತೀಶ್‌ ಶೆಟ್ಟಿ ಉದ್ದೇಶಪೂರ್ವಕಾವಗಿ ಪತ್ನಿಯ ಚಾರಿತ್ರ್ಯಹನನ ಮಾಡಿರುವುದು ಸಾಬೀತಾಗಿದೆ ಎಂದು ಹೇಳಿದೆ. ನ್ಯಾಯಿಕ ದಂಡಾಧಿಕಾರಿ ಸುರೇಶ್‌ ಇ.ಎಸ್‌. ಅವರು ಅಪರಾಧಿಗೆ ಒಂದು ವರ್ಷದ ಸಾದಾ ಕಾರಾಗೃಹ ವಾಸ ಮತ್ತು 5,000 ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದರೆ ಮತ್ತೆ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ಹೇಳಿದ್ದಾರೆ.

error: Content is protected !!
Scroll to Top