ಮೈಸೂರು: ನಗರದ ವಿವಿಪುರಂ ನಲ್ಲಿರುವ ರಾಷ್ಟ್ರಪತಿ ಕುವೆಂಪು ಅವರ ಮನೆ ಉದಯರವಿಯನ್ನು ಮಾರುವ ಅಥವಾ ಸರ್ಕಾರದ ವಶಕ್ಕೆ ನೀಡುವ ಯಾವುದೇ ಉದ್ದೇಶ ನಮ್ಮ ಮುಂದೆ ಇಲ್ಲ. ಅದನ್ನು ನಾವೇ ಮ್ಯೂಸಿಯಂ ಆಗಿ ಪರಿವರ್ತನೆ ಮಾಡುತ್ತೇವೆ ಎಂದು ಕುವೆಂಪು ಅವರ ಕುಟುಂಬ ವರ್ಗ ಮಾಹಿತಿ ನೀಡಿದೆ.
ಈ ಬಗ್ಗೆ ಕುವೆಂಪು ಅವರ ಅಳಿಯ, ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದ ಗೌಡ ಮಾತನಾಡಿದ್ದು, ಉದಯರವಿ ಎಂಬುದು ಕುವೆಂಪು ಅವರು 60 ವರ್ಷಗಳ ಕಾಲ ಬಾಳಿ ಬದುಕಿದ ಮತ್ತು ಅವರ ಬಹುತೇಕ ಕೃತಿಗಳು ರಚನೆಯಾದ ಸ್ಥಳವಾಗಿದೆ. ಈ ಮನೆಯನ್ನು ಕೆಲವು ವರ್ಷಗಳ ಹಿಂದೆ ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಸರ್ಕಾರ ಪ್ರಯತ್ನ ನಡೆಸಿತಾದರೂ, ಅದು ನೆರವೇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈಗ ಕನ್ನಡಿಗರ ಅಪೇಕ್ಷೆಯಂತೆ ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲು ನಾವೇ ಕಾರ್ಯೋನ್ಮುಖರಾಗಿದ್ದೇವೆ. ಸದ್ಯದಲ್ಲೇ ಈ ಮನೆಯ ದುರಸ್ತಿ ಕೆಲಸವನ್ನು ಸಹ ಮಾಡಲಾಗುವುದು. ಈ ಮನೆಯ ಮಾರಾಟದ ಉದ್ದೇಶವೇ ನಮಗೆ ಇಲ್ಲವಾದ್ದರಿಂದ, ಹಣಕಾಸಿನ ವಿಷಯ ಇಲ್ಲಿ ಅಪ್ರಸ್ತುತ ಎಂಬುದಾಗಿಯೂ ಹೇಳಿದ್ದಾರೆ.
























