ಪುಸ್ತಕ ಇನ್ನೂ ಯಾವುದೇ ರೂಪದಲ್ಲಿ ಪ್ರಕಟವಾಗಿಲ್ಲ ಎಂದಿರುವ ಪೆಂಗ್ವಿನ್
ನವದೆಹಲಿ: ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಇನ್ನೂ ಪ್ರಕಟವಾಗದ ತಮ್ಮ ಆತ್ಮಚರಿತ್ರೆಯ ಸುತ್ತ ಹೆಚ್ಚುತ್ತಿರುವ ವಿವಾದಗಳ ಮಧ್ಯೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಣೆ ಪ್ರಕಾಶಕರಾದ ಪೆಂಗ್ವಿನ್ ಸಂಸ್ಥೆಯ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಪೆಂಗ್ವಿನ್ ಹೇಳಿಕೆಯನ್ನು ಮರುಹಂಚಿಕೊಳ್ಳುವ ಮೂಲಕ ನರವಾಣೆ ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ.
‘ಇದು ಪುಸ್ತಕದ ಸ್ಟೇಟಸ್’ ಎಂದು ಜನರಲ್ ನರವಾಣೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜನರಲ್ ನರವಣೆ ಅವರ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯ ವಿಶೇಷ ಪ್ರಕಾಶನ ಹಕ್ಕುಗಳ ಬಗ್ಗೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ನಿನ್ನೆ ಸ್ಪಷ್ಟೀಕರಣವನ್ನು ನೀಡಿದ್ದು, ಆ ಪುಸ್ತಕವನ್ನು ಪ್ರಕಟಿಸಲಾಗಿಲ್ಲ ಎಂದು ಹೇಳಿದೆ.
ಹಸ್ತಪ್ರತಿಯ ಅನಧಿಕೃತ ಪ್ರತಿಗಳ ಪ್ರಸರಣದ ಆರೋಪದ ಕುರಿತು ಹೆಚ್ಚುತ್ತಿರುವ ವಿವಾದ ಮತ್ತು ಸಂಸತ್ತಿನಲ್ಲಿ ಎದ್ದಿರುವ ರಾಜಕೀಯ ವಿವಾದದ ನಡುವೆ ಈ ಹೇಳಿಕೆ ಬಂದಿದೆ. ಇನ್ನೂ ಅನುಮೋದನೆ ಪಡೆಯದ ಪ್ರಕಟಣೆಯಿಂದ ಅಕ್ರಮವಾಗಿ ವಿತರಿಸಲಾಗಿದೆ ಎಂದು ಶಂಕಿಸಲಾಗಿರುವ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಆತ್ಮಚರಿತ್ರೆಯ ಪ್ರತಿಗಳು ಡಿಜಿಟಲ್ ಮತ್ತು ಇತರ ಸ್ವರೂಪಗಳಲ್ಲಿ ಪ್ರಸಾರವಾಗುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪೆಂಗ್ವಿನ್ ಸ್ಪಷ್ಟನೆ ನೀಡಿದೆ. ‘ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಆದರೆ, ಇನ್ನೂ ಪುಸ್ತಕ ಪ್ರಕಟಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಪುಸ್ತಕದ ಯಾವುದೇ ಪ್ರತಿಗಳನ್ನು ಪ್ರಕಾಶಕರು ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ. ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ ಎಂದು ಕಂಪನಿ ಹೇಳಿದೆ.
ಡೋಕ್ಲಾಮ್ನಲ್ಲಿ ಭಾರತ-ಚೀನ ಸೇನೆಯ ನಡುವೆ ಸಂಘರ್ಷ ಏರ್ಪಟ್ಟಾಗ ಕೇಂದ್ರ ಸರ್ಕಾರ ಸೇನೆಗೆ ಸೂಕ್ತ ನಿರ್ದೇಶನ ನೀಡಿಲ್ಲ ಎಂಬ ಅಂಶವೊಂದನ್ನು ಈ ಪುಸ್ತಕದಲ್ಲಿ ನರವಣೆ ಬರೆದಿದ್ದಾರೆ ಎಂದು ನಿಯತಕಾಲಿಕವೊಂದು ವರದಿ ಮಾಡಿತ್ತು. ಈ ವರದಿಯ ಆಧಾರದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ ಅಧಿವೇಶನದಲ್ಲಿ ಕೋಲಾಹಲ ಉಂಟು ಮಾಡಲು ಮುಂದಾಗಿದ್ದರು. ಆದರೆ ಕೇಂದ್ರ ಸರ್ಕಾರ ಅವರ ಪ್ರಯತ್ನವನ್ನು ವಿಫಲಗೊಳಿಸಿತ್ತು. ಬಳಿಕ ರಾಹುಲ್ ಗಾಂಧಿ ಪುಸ್ತಕದ ಪ್ರತಿಯೊಂದನ್ನು ಪ್ರದರ್ಶಿಸಿದ್ದರು. ಪ್ರಕಟವಾಗದ ಪುಸ್ತಕ ಅವರಿಗೆ ಹೇಗೆ ಸಿಕ್ಕಿತು ಎಂಬ ವಿವಾದ ಈಗ ಎದ್ದಿದೆ.
























