ಹಣಕಾಸು ನಷ್ಟವನ್ನು ಲೆಕ್ಕ ಹಾಕಿದ ಬಳಿಕ ಆಡಲು ಒಪ್ಪಿಗೆ ಸೂಚಿಸಿದ ಪಾಕ್
ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತದ ಜೊತೆಗೆ ಪಂದ್ಯ ಆಡಲು ಕೊನೆಗೂ ಪಾಕಿಸ್ತಾನ ನಿರ್ಧರಿಸಿದೆ ಎಂದು ವರದಿಯಾಗಿದೆ. ಭಾರತ ವಿರುದ್ಧ ಫೆ.15ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಲೀಗ್ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಗೊಂದಲ ಇದೀಗ ಸಂಪೂರ್ಣವಾಗಿ ಬಗೆಹರಿದಿದ್ದು, ನಿಗದಿಯಂತೆ ಪಂದ್ಯ ನಡೆಯಲಿದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನ ಸರ್ಕಾರ ಸೋಮವಾರ ಈ ಸಂಬಂಧ ರಾಷ್ಟ್ರೀಯ ತಂಡ ಟಿ20 ಟೂರ್ನಿಯಲ್ಲಿ ಭಾರತದ ವಿರುದ್ಧ ಪಂದ್ಯ ಆಡಲು ಅನುಮತಿ ನೀಡಿದ್ದು, ಪಂದ್ಯದ ವೇಳಾಪಟ್ಟಿಯನ್ನು ತಾನು ಗೌರವಿಸುವುದಾಗಿ ಸ್ಪಷ್ಟಪಡಿಸಿದೆ. ಪಂದ್ಯ ಬಹಿಷ್ಕರಿಸುವುದರಿಂದ ಪಾಕಿಸ್ತಾನದ ಮೇಲಾಗುವ ಸಂಭಾವ್ಯ ಹಣಕಾಸು ಪರಿಣಾಮದ ಬಗ್ಗೆ ಐಸಿಸಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಇದೀಗ ಪಾಕಿಸ್ತಾನ ತನ್ನ ನಿಲುವು ಬದಲಿಸಿದೆ.
ಫೋರ್ಸ್ ಮಜೂರ್ ನಿಯಮಾವಳಿಯ ಆಧಾರದಲ್ಲಿ ಕೊನೆಕ್ಷಣದಲ್ಲಿ ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ ನಿರ್ಧರಿಸಿತ್ತು. ಅನಿಶ್ಚಿತ ಸಂದರ್ಭಗಳಲ್ಲಿ ಪಾಲುದಾರ ದೇಶ ತನ್ನ ಗುತ್ತಿಗೆ ಹೊಣೆಗಾರಿಕೆಯನ್ನು ಈಡೇರಿಸದಿರಲು ಅವಕಾಶವಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರಿಗೆ ಪಿಸಿಬಿ ಅಧ್ಯಕ್ಚ ಮೊಹ್ಸಿನ್ ನಖ್ವಿಯವರು ಅಧಿಕೃತವಾಗಿ ಪಿಸಿಬಿ, ಬಿಸಿಬಿ ಹಾಗೂ ಐಸಿಸಿ ನಡುವೆ ನಡೆದ ಸುಧೀರ್ಘ ಚರ್ಚೆಯ ವಿವರ ನೀಡಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪಿಸಿಬಿಗೆ ಮಾಡಿಕೊಂಡಿದ್ದ ಮನವಿಯನ್ನು ಪಾಕ್ ಸರ್ಕಾರ ಪರಾಮರ್ಶಿಸಿದ್ದು, ಶ್ರೀಲಂಕಾ, ಯುಎಇ ಹಾಗೂ ಇತರ ಸದಸ್ಯ ದೇಶಗಳ ಬೆಂಬಲವನ್ನು ಕೂಡ ಪರಾಮರ್ಶಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದೆ.
























