ಮುಡಾ ಹಗರಣ ಮುಚ್ಚಿ ಹಾಕಲು ಲೋಕಾಯುಕ್ತರಿಗೆ ಲಂಚ : ಸ್ನೇಹಮಯಿ ಕೃಷ್ಣ ಆರೋಪ

ಮತ್ತೆ ಜೀವ ಪಡೆದುಕೊಂಡ ಮುಡಾ ಹಗರಣ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಸಂಭವಿಸಿದ ಬಹುಕೋಟಿ ಸೈಟ್‌ ಹಗರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಅಧಿಕಾರಿಗಳಿಗೆ ಕೋಟಿಗಟ್ಟಲೆ ರೂಪಾಯಿ ಲಂಚ ನೀಡಲಾಗಿದೆ ಎಂಬ ಸ್ಫೋಟಕ ಆರೋಪವನ್ನು ಸ್ನೇಹಮಯಿ ಕೃಷ್ಣ ಮಾಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಿಂದ ಕೋಟಿಗಟ್ಟಲೆ ರೂಪಾಯಿ ಲಂಚ ಪಡೆದ ಬಗ್ಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತರಿಗೆ ಕೋಟಿಗಟ್ಟಲೆ ಹಣ ಲಂಚ ಕೊಡಲಾಗಿದೆ ಎಂದು ದೂರುದಾರ ಸ್ನೇಹಮಯಿ‌ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ದೋಷಾರೋಪಣ ಪತ್ರ ಸಲ್ಲಿಸಿರುವ ತನಿಖಾಧಿಕಾರಿ ಮತ್ತೊಬ್ಬ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಯಾವುದೇ ಅಂತಿಮ ವರದಿಯೂ ಸಲ್ಲಿಸಿಲ್ಲ. ಇದಕ್ಕಾಗಿ ಡಿ.ಬಿ. ನಟೇಶ್ 4.35 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.





















































 
 

ಡಿ.ಬಿ.ನಟೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ಒಟ್ಟು ನಾಲ್ಕು ಕೋಟಿ ಮುವತ್ತೈದು ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎನ್ನುವ ಸ್ಪಷ್ಟ ದಾಖಲೆಗಳು ನನ್ನ ಬಳಿ ಇವೆ. ಅದೇ ಹಣದ ಕಾರಣಕ್ಕೆ ತನಿಖಾಧಿಕಾರಿ ನಟೇಶ್ ಅವರನ್ನು ರಕ್ಷಿಸುವಂತೆ ನಡೆದುಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಸ್ನೇಹಮಯಿ ಕೃಷ್ಣ ಅವರ ಕೈಗೆ ಸಿಕ್ಕಿರುವ ದಾಖಲೆಗಳಲ್ಲಿ “DCM” ಎಂಬ ಪದದ ಮುಂದೆ 12.50 ಕೋಟಿ ರೂಪಾಯಿ ನೀಡಿರುವ ಉಲ್ಲೇಖವೂ ಇದೆ. ಇದನ್ನು ಕಂಪನಿಯ ಹೆಸರು ಎಂದು ಹೇಳಲಾಗಿದೆಯಾದರೂ, DCM ಅಂದರೆ ಏನು? ಯಾರ ಸೂಚನೆ? ಯಾರಿಗೆ ಹಣ? ಎಂಬ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ.

ಈ ಎಲ್ಲ ಅಂಶಗಳನ್ನು ಆಧರಿಸಿ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದ್ದು, ಇದನ್ನು ನ್ಯಾಯಾಲಯ ಸ್ವೀಕರಿಸಿದೆ. ಈ ಸಂಬಂಧ ಫೆಬ್ರವರಿ 20ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

error: Content is protected !!
Scroll to Top