ಭಾರಿ ಕುತೂಹಲ ಕೆರಳಿಸಿದ ಡಿಕೆಶಿ ಹೈಕಮಾಂಡ್ ಭೇಟಿ
ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಎರಡನೇ ಸುತ್ತಿನ ಕುರ್ಚಿ ಜಗಳ ತಾರಕಕ್ಕೇರಿದೆ. ಶಿವಕುಮಾರ್ ಈ ಸಲ ಏನಾದರೊಂದು ತೀರ್ಮಾನವಾಗಲೇಬೇಕು ಎಂದು ಹಠಕ್ಕೆ ಬಿದ್ದಿದ್ದು, ಅವರ ಇತ್ತೀಚೆಗಿನ ಹೇಳಿಕೆಗಳು ಮತ್ತು ನಡೆಗಳು ಇದನ್ನು ಪುಷ್ಟೀಕರಿಸುತ್ತಿವೆ.
ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ವದಂತಿಗಳು ಮುಂದುವರಿದಿರುವಂತೆಯೇ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯನ್ನು ಕೈಬಿಟ್ಟು ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ದಿಢೀರ್ ಪ್ರಯಾಣ ಬೆಳೆಸಿದ್ದಾರೆ. ಮತ್ತೊಂದೆಡೆ ಅವರಿಗೆ ಸಂಬಂಧಿಸಿದ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯನ್ನು ಸಿದ್ದರಾಮಯ್ಯ ಇಂದು ನಡೆಸಲಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಇಲಾಖೆಯಲ್ಲಿ ಕೆಲಸಗಳು ಉತ್ತಮವಾಗಿ ನಡೆಯುತ್ತಿವೆ. ಮುಖ್ಯಮಂತ್ರಿ ಜಲಸಂಪನ್ಮೂಲ ಇಲಾಖೆಯ ಮುಖ್ಯಸ್ಥರಾಗಿದ್ದಾರೆ. ನಮ್ಮ ಅಧಿಕಾರಿಗಳು ಸಭೆಯಲ್ಲಿ ಹಾಜರಿರುತ್ತಾರೆ. ಅವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಎಲ್ಲವೂ ಯೋಜನಾಬದ್ಧವಾಗಿರುವ ಕಾರಣ ಇಲಾಖೆಯಲ್ಲಿ ಹೆಚ್ಚಿನ ಕೆಲಸ ಏನೂ ಇಲ್ಲ ಎಂದರು.
ದೆಹಲಿ ಭೇಟಿ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಕೇಂದ್ರ ಸಚಿವರು, ಪಕ್ಷದ ಕಾನೂನು ತಂಡ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಕೇಂದ್ರ ಸಚಿವರು, ನಮ್ಮ ಕಾನೂನು ತಂಡ, ಕಾಂಗ್ರೆಸ್ ನಾಯಕರು ಮತ್ತು ನನಗೆ ಕರೆ ಮಾಡಿರುವ ವರಿಷ್ಠರನ್ನು ಭೇಟಿ ಮಾಡುತ್ತೇನೆ ಎಂದರು. ಆದರೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡ್ತೀರಾ ಎಂಬ ಪ್ರಶ್ನೆಗೆ ಅದೆಲ್ಲ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಮಾಧ್ಯಮದವರ ನಿರಂತರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದ ಡಿ.ಕೆ ಶಿವಕುಮಾರ್, ನಿಮಗೆ ಯಾಕೆ ಇಷ್ಟೊಂದು ಕುತೂಹಲ? ನಾನೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಉಪಮುಖ್ಯಮಂತ್ರಿ. ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್ 6ಕ್ಕೆ ಆರು ವರ್ಷ ಪೂರೈಸಲಿದ್ದೇನೆ. ನಮ್ಮ ವಿರೋಧ ಪಕ್ಷದ ನಾಯಕ, ಮುಖಂಡರು, ಸಂಸದರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ಅವರನ್ನು ಭೇಟಿಯಾಗುತ್ತಲೇ ಇರುತ್ತೇನೆ, ನನ್ನ ಕಷ್ಟ-ನಲಿವುಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.
ತಮ್ಮ ಭೇಟಿಯ ಬಗ್ಗೆ ವಿವರಿಸಿದ ಶಿವಕುಮಾರ್ ಅವರು ದೆಹಲಿಯ ಇಂದಿರಾ ಭವನಕ್ಕೆ ಭೇಟಿ ನೀಡಲಿದ್ದು, ಕೆಲವು ನಾಯಕರನ್ನು ಭೇಟಿಯಾಗಲಿದ್ದೇನೆ. ಯಾರನ್ನು ಭೇಟಿ ಮಾಡುತ್ತೇನೆ ಎಂಬುದನ್ನು ಅವರೇ ಹೇಳ್ತಾರೆ ಎಂದು ವ್ಯಂಗ್ಯವಾಡಿದರು. ಅಧಿಕಾರ ಹಸ್ತಾಂತರ ಕುರಿತು ದೆಹಲಿಯಲ್ಲಿ ಚರ್ಚೆಯಾಗಲಿದೆಯೇ ಎಂಬ ಪ್ರಶ್ನೆಗೆ ‘ನಾನು ರಾಜಕೀಯ ವ್ಯಕ್ತಿ’ ಎಂದಷ್ಟೇ ಹೇಳಿ ಅಲ್ಲಿಂದ ನಿರ್ಗಮಿಸಿದರು.
ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರು ಅಪ್ಪಾಜಿಯೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಪದೇಪದೆ ಹೇಳುತ್ತಿರುವುದು ಡಿಕೆಶಿಗೆ ಸಮಾಧಾನವುಂಟ ಮಾಡಿದೆ. ಇತ್ತೀಚೆಗೆ ಪುತ್ತೂರಿಗೆ ಬಂದಿದ್ದ ಅವರು ಯತೀಂದ್ರ ಕುರಿತು ನೀಡಿದ ವ್ಯಂಗ್ಯಭರಿತ ಖಡಕ್ ಹೇಳಿಕೆಯೇ ಅವರು ಎಷ್ಟು ಮುನಿಸಿನಲ್ಲಿದ್ದಾರೆ ಎಂದು ಸೂಚಿಸುತ್ತಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಡಿಕೆಶಿಯ ಇಂದಿನ ದೆಹಲಿ ಭೇಟಿ ಅಪಾರ ಕುತೂಹಲ ಮೂಡಿಸಿದೆ.
























