ಬೆಂಗಳೂರು: ಪುತ್ತೂರಿನಲ್ಲಿ ಯುವತಿಗೆ ಮದುವೆಯಾಗದೆ ಮಗು ಕೊಟ್ಟು ಮೋಸ ಮಾಡಿದ ಪುತ್ರನಿಗೆ ಆಶ್ರಯ ನೀಡಿರುವ ಆರೋಪ ಎದುರಿಸುತ್ತಿರುವ ಪಿ. ಜಿ. ಜಗನ್ನಿವಾಸ ರಾವ್ ಅವರಿಗೆ ಹೈಕೋರ್ಟ್ ಕೊಂಚ ರಿಲೀಫ್ ನೀಡಿದೆ.
ಜಗನ್ನಿವಾಸ್ ರಾವ್ ವಿರುದ್ಧದ ಕಾನೂನು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಳೆದ ಜೂನ್ ತಿಂಗಳಿನಲ್ಲಿ ಪುತ್ತೂರು ಮಹಿಳಾ ಠಾಣೆಯಲ್ಲಿ ಯುವತಿಯೊಬ್ಬಳು ಕೃಷ್ಣ ಜೆ. ರಾವ್ ಎಂಬ ಯುವಕ ಮದುವೆಯಾಗುವುದಾಗಿ ನಂಬಿಸಿ, ಮಗು ಕರುಣಿಸಿ ಬಳಿಕ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದಳು. ದೂರು ದಾಖಲಾಗುತ್ತಿದ್ದ ಹಾಗೆ ಆರೋಪಿ ತಲೆಮರೆಸಿಕೊಂಡಿದ್ದು, ಈ ವೇಳೆ ಕೃಷ್ಣ ರಾವ್ ಗೆ ಆಶ್ರಯ ನೀಡಿದ್ದಾರೆ ಎಂಬ ಕಾರಣಕ್ಕೆ ಆತನ ತಂದೆ ಜಗನ್ನಿವಾಸ ರಾವ್ ಮತ್ತು ಇತರ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಜಗನ್ನಿವಾಸ ರಾವ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿನಾ ಕಾರಣ ತಮ್ಮ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ, ಇದನ್ನು ರದ್ದು ಮಾಡಬೇಕು ಎಂದು ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಯಾವುದೇ ಬಲವಾದ ಸಾಕ್ಷ್ಯ ಇಲ್ಲದೆ ಆರೋಪಿಯ ತಂದೆ ಎನ್ನುವ ಕಾರಣಕ್ಕೆ ಈ ಪ್ರಕರಣದಲ್ಲಿ ಭಾಗೀದಾರ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಹೇಳಿರುವ ಕೋರ್ಟ್, ಮುಂದಿನ ವಿಚಾರಣೆಯ ವರೆಗೆ ಈ ಸಂಬಂಧದ ತನಿಖೆಗೆ ಬ್ರೇಕ್ ಹಾಕಿದೆ.
























