ಟಿ20 ವಿಶ್ವಕಪ್‌ : ಅನನುಭವಿ ಅಮೆರಿಕ ಎದುರು ತಿಣುಕಾಡಿದ ಭಾರತ

ಮೊದಲ ಪಂದ್ಯದಲ್ಲೇ ಬ್ಯಾಟಿಂಗ್‌ ಬಂಡವಾಳ ಬಯಲು; ಪ್ರಯಾಸದ ಜಯ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಮೆರಿಕ ನಡುವಿನ 2026ರ ಟಿ20 ವಿಶ್ವಕಪ್ ಮೊದಲ ದಿನದ ಮೂರನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಜಯ ದಾಖಲಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಗಿಳಿದಿರುವ ಭಾರತ ಗೆಲುವಿನ ಶುಭಾರಂಭ ಮಾಡಿದೆ. ಕ್ರಿಕೆಟಿನಲ್ಲಿನ್ನೂ ಅಂಬೆಗಾಲಿಡುತ್ತಿರುವ ಅಮೆರಿಕ ತಂಡವನ್ನು ಭಾರತ ಸೋಲಿಸಿದೆ.

ಈ ಪಂದ್ಯದಲ್ಲಿ ದುರ್ಬಲ ತಂಡದ ಎದುರು ಭಾರತ ದಾಖಲೆಗಳ ಮೇಲೆ ದಾಖಲೆ ಬರೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅಮೆರಿಕನ್ನರ ಬಿಗು ಬೌಲಿಂಗ್‌ಗೆ ಕಂಗೆಟ್ಟ ಭಾರತೀಯರು ರನ್‌ ಗಳಿಸಲು ತಿಣುಕಾಡಿದರು. ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಕ್ರೀಸ್‌ಕಚ್ಚಿ ಆಡದಿರುತ್ತಿದ್ದರೆ ಮೊದಲ ಪಂದ್ಯದಲ್ಲೇ ಭಾರತ ಮುಖಭಂಗ ಅನುಭವಿಸಲಬೇಕಾಗುತ್ತಿತ್ತು.





















































 
 

ಭಾರತದ ವಿರುದ್ಧ ಸೋತರೂ ಅನನುಭವಿ ಅಮೆರಿಕ ತಂಡ ದಿಟ್ಟ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರವಾಯಿತು. ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಟೀಂ ಇಂಡಿಯಾವನ್ನು ಕೇವಲ 161 ರನ್​ಗಳಿಗೆ ಕಟ್ಟಿಹಾಕುವಲ್ಲಿ ಅಮೆರಿಕ ಬೌಲರ್​ಗಳು ಯಶಸ್ವಿಯಾದರು. ಈ ಗುರಿ ಬೆನ್ನಟ್ಟಿದ ಅಮೆರಿಕ ತಂಡದ ಬ್ಯಾಟಿಂಗ್ ವಿಭಾಗದ ಭಾರತದ ಬೌಲಿಂಗ್ ದಾಳಿಯ ಮುಂದೆ ತತ್ತರಿಸಿ 20 ಓವರ್​ಗಳಲ್ಲಿ 132 ರನ್​ಗಳನಷ್ಟೇ ಕಲೆಹಾಕಲು ಶಕ್ತವಾಗಿ 29 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭ ನಿರೀಕ್ಷೆಯಂತೆ ಇರಲಿಲ್ಲ. ಅಭಿಷೇಕ್ ಶರ್ಮಾ ಗೋಲ್ಡನ್ ಡಕ್‌ಗೆ ಬಲಿಯಾದರು. ಆ ಬಳಿಕ ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ ಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಾಯಕನ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಕೊನೆಯವರೆಗೂ ಅಜೇಯರಾಗಿ ಉಳಿದು, 49 ಎಸೆತಗಳಲ್ಲಿ 84 ರನ್ ಗಳಿಸಿದರು. 171.42 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯ ನಾಲ್ಕು ಸಿಕ್ಸರ್‌ ಮತ್ತು 10 ಬೌಂಡರಿಗಳನ್ನು ಬಾರಿಸಿದರು.

162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಮೆರಿಕ ತಂಡ ಕೂಡ ಭಾರತೀಯ ಬೌಲರ್‌ಗಳ ಮುಂದೆ ಮುಗ್ಗರಿಸಿತು. ಎರಡನೇ ಓವರ್‌ನಲ್ಲಿ ಗೌಸ್ ಅವರನ್ನು ಔಟ್ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಅಮೆರಿಕಕ್ಕೆ ಆಘಾತ ನೀಡಿದರು. ನಂತರ ಆರ್ಷದೀಪ್ ಸಿಂಗ್ ಅಮೆರಿಕದ ನಾಯಕ ಮೋನಾಂಕ್ ಪಟೇಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆ ಬಳಿಕವೂ ಅಮೆರಿಕ ತಂಡಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಂಡದ ಪರ ಮಿಲಿಂದ್ (34) ಮತ್ತು ಸಂಜಯ್ (37) ಸ್ವಲ್ಪ ಹೋರಾಟ ನೀಡಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಮೆರಿಕ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 132 ರನ್‌ಗಳಿಗೆ ಸೀಮಿತವಾಯಿತು. ಭಾರತ ಪರ ಸಿರಾಜ್ 3, ಅರ್ಶ್‌ದೀಪ್ 2 ಮತ್ತು ಅಕ್ಷರ್ ಪಟೇಲ್ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

error: Content is protected !!
Scroll to Top