ಎರಡು ಎಕರೆ ಪ್ರದೇಶದ ಮರ-ಗಿಡ ಸುಟ್ಟು ಕರಕಲು
ಕಡಬ : ತಾಲೂಕಿನ ಕಾಯ್ಮಣ ಗ್ರಾಮದ ಮುಂಗ್ಲಿಮಜಲು ಪದವು ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ನೆಡುತೋಪು ಹಾಗೂ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಅಪಾರ ನಷ್ಟ ಉಂಟಾದ ಘಟನೆ ಶುಕ್ರವಾರ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿರುವುದಾಗಿ ಅಂದಾಜಿಸಲಾಗಿದ್ದು, ಮಧ್ಯಾಹ್ನದ ಧಗಧಗಿಸುವ ಬಿಸಿಲಿನ ಸಂದರ್ಭದಲ್ಲಿ ಬೆಂಕಿ ಬಿದ್ದು ಅರಣ್ಯ ಪ್ರದೇಶವನ್ನು ಆವರಿಸಿಕೊಂಡಿದೆ, ಮುಂಗ್ಲಿಮಜಲು, ಪದವು ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ನಾಟಿ ಮಾಡಿರುವ ನೆಡುತೋಪಿನ ಹಣ್ಣು ಹಂಪಲುಗಳ ಗಿಡಗಳು ಸಂಪೂರ್ಣ ಸುಟ್ಟು ಹೋಗಿವೆ. ಅರಣ್ಯ ಪ್ರದೇಶ ಹಾಗೂ ಮುಳಿಹುಲ್ಲು ಬೆಂಕಿಗೆ ಆಹುತಿಯಾಗಿದೆ.
20ಕ್ಕೂ ಹೆಚ್ಚು ಜನ ಸ್ಥಳೀಯರು ಸೇರಿಕೊಂಡು ಬೆಂಕಿಯನ್ನು ಅರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿಸಿಕೊಂಡಿದ್ದಾರೆ. ಇದೇ ವೇಳೆ ಪುತ್ತೂರಿನಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸುಮಾರು ಎರಡು ಎಕರೆ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಅರಣ್ಯ ಇಲಾಖಾ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಕೈಜೋಡಿಸಿದ್ದಾರೆ.
























