ದೇಶ-ವಿದೇಶಗಳಲ್ಲಿ ಹರಡಿದ ಜಾಲ, ನೂರಾರು ಬ್ಯಾಂಕ್ ಖಾತೆಗಳು, ಸಾವಿರಾರು ಕೋಟಿ ರೂ. ವ್ಯವಹಾರ
ಮಂಗಳೂರು: ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ವಂಚಿಸಿದ ಆನ್ಲೈನ್ ವಂಚನೆ ಜಾಲವೊಂದನ್ನು ಭೇದಿಸಿರುವ ಮಂಗಳೂರು ಸೆನ್ ಪೊಲೀಸರು ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿದ್ದಾರೆ. ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೀನಾದ ವಂಚಕರಿದ್ದು, ನೇಪಾಳ ಪೊಲೀಸರು ಚೀನಾದ ವಂಚಕರನ್ನು ಈಗಾಗಲೇ ಬಂಧಿಸಿದ್ದಾರೆ. 5 ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಗುಜರಾತ್ನ ಬಾವಾ ನಗರ್ ಜಿಲ್ಲೆಯ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳ ಕೋಲ್ಕತ್ತಾದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಾಂಡ್ನ ಸಿಂಗಬುಮ್ ಜಿಲ್ಲೆಯ ಪುಪ್ಲ ಶಿವಕುಮಾರ್ ರಾವ್ (32), ಉತ್ತರ ಪ್ರದೇಶದ ಮಾವೋ ಜಿಲ್ಲೆಯ ಗೌರವ್ ಪಾಂಡೆ (24), ಉತ್ತರ ಪ್ರದೇಶದ ಸುಲ್ತಾನ್ ಪುರ್ ಜಿಲ್ಲೆಯ ಹರ್ಷ್ ಮಿಸ್ರಾ (22), ಜಾರ್ಖಾಂಡ್ನ ದೇವಗಢ್ ಜಿಲ್ಲೆಯ ರಾಜೇಶ್ ಮಂಡನ್ (30), ಉತ್ತರ ಪ್ರದೇಶದ ಲಖನೌ ಜಿಲ್ಲೆಯ ಮೊಹಮ್ಮದ್ ಆಕೀಬ್ ಅಲಿ (27), ಬಿಹಾರದ ನಳಂದ ಜಿಲ್ಲೆಯ ರಾಜೀವ್ ರಂಜನ್ ಕುಮಾರ್ (30), ಜಾರ್ಖಾಂಡ್ನ ಸಿಂಗಬುಮ್ ಜಿಲ್ಲೆಯ ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ನೌಶಾದ್ ಅಲಿ (34), ರಾಜಸ್ಥಾನದ ಜೈಪುರ್ ಜಿಲ್ಲೆಯ ಓಂ ಪ್ರಕಾಶ್ ಯಾಧವ್ (37) ಸೆರೆಯಾದ ಆರೋಪಿಗಳು.
1 ಲ್ಯಾಪ್ಟಾಪ್, 12 ಮೊಬೈಲ್ ಪೋನ್, 20 ವಿವಿಧ ಕಂಪನಿಯ ಸಿಮ್ಕಾರ್ಡ್ಗಳು, 20 ಬೇರೆ ಬೇರೆ ಬ್ಯಾಂಕ್ಗಳ ಡೆಬಿಟ್, ಕ್ರೆಡಿಟ್ ಕಾರ್ಡ್ಗಳನ್ನು ವಂಚಕರಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ ಪರಿಶೀಲಿಸಿದಾಗ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಕಂಡುಬಂದಿವೆ. ಈ ಬ್ಯಾಂಕ್ ಖಾತೆಗಳ ಮೇಲೆ 4580ಕ್ಕೂ ಹೆಚ್ಚು NCRP ಪೋರ್ಟಲ್ನಲ್ಲಿ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1 ಬ್ಯಾಂಕ್ ಖಾತೆಯಲ್ಲಿ 167 ಕೋಟಿ ಹಣ ವರ್ಗಾವಣೆಯಾಗಿರುತ್ತದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ಸುಮಾರು ರೂ 30,70,26,725 ಹಣ ವರ್ಗಾವಣೆ ಆಗಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆದಬೇಕಾಗಿದೆ.
ಮಂಗಳೂರಿನ ವ್ಯಕ್ತಿಯೊಬ್ಬರಿಂದ 1 ಕೋಟಿ 38 ಲಕ್ಷ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಈ ವಂಚಕರು ನೇಪಾಳದಲ್ಲಿ ಕುಳಿತು ವಂಚನೆ ಮಾಡುತ್ತಿದ್ದ ಬಗ್ಗೆ ತನಿಖೆಯಿಂದ ಹಾಗೂ ತಾಂತ್ರಿಕ ವಿಶ್ಲೇಷಣೆಯಿಂದ ಪತ್ತೆ ಹಚ್ಚಿ ವಂಚಕರ ಗ್ಯಾಂಗನ್ನು ದಸ್ತಗಿರಿ ಮಾಡಲಾಗಿದೆ.
ಒಂದು ವಂಚಕರ ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್ಗಳನ್ನು ನೇಮಕ ಮಾಡಿಕೊಂಡು, ವಂಚನೆಯ ಹಣವನ್ನು ವರ್ಗಾವಣೆ ಮಾಡುವುದು ಹಾಗೂ ಹಣವನ್ನು ಯುಎಸ್ಡಿಟಿಯಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಿದ್ದರು. ಇನ್ನೊಂದು ತಂಡ ಕಾಂಬೋಡಿಯಾ ಮತ್ತು ಇತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹೆಚ್ಚು ಹಣ ಗಳಿಸುವ ಆಮೀಷ ಒಡ್ಡಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದು, ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿರುವುದು ಪತ್ತೆಯಾಗಿದೆ.
ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಉಪಯೋಗಿಸಲು ದೂರುದಾರರಿಗೆ ನೀಡಿದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ NCRP ಪೋರ್ಟಲ್ ನಲ್ಲಿ ಸುಮಾರು 128 ಪ್ರಕರಣಗಳು ಮತ್ತು ಒಟ್ಟು 36 ಎಫ್ಐಆರ್ ದಾಖಲಾಗಿದೆ.
ಕಾಂಬೋಡಿಯಾ ಮತ್ತು ದುಬೈಗಳಲ್ಲಿ ಕುಳಿತು ಅಪರಿಚಿತ ವಾಟ್ಸಾಪ್ ಮೊಬೈಲ್ ನಂಬರ್ಗಳ ಮೂಲಕ ಇನ್ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ಬುಕ್ ಮುಖಾಂತರ ಹೂಡಿಕೆದಾರರನ್ನು ಸಂಪರ್ಕಿಸಿ ಹೆಚ್ಚಿನ ಲಾಭಂಶ ನೀಡುವುದಾಗಿ ಆರ್ಕಷಿಸುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಾಂಶ ಬಂದಿರುವುದಾಗಿ ಆಪ್ ಮೂಲಕ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭಂಶದ ಹಣವನ್ನು ನೀಡಿ ನಂಬಿಕೆ ಬರುವ ಹಾಗೆ ಮಾಡಿದ ನಂತರ ಉಳಿದ ಹಣನ್ನು ಡ್ರಾ ಮಾಡಬೇಕಾದರೆ, ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕೆಂದು ಪುಸುಲಾಯಿಸಿ ಹಣವನ್ನು ಹೂಡಿಕೆ ಮಾಡಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು 60 ಲಕ್ಷದಿಂದ 1 ಕೋಟಿಯವರೆಗೆ Investment fraudಗೆ ಒಳಪಡಿಸುತ್ತಿತ್ತು.
























