ಪಟಾಕಿ ಸಿಡಿಸಿ ಹುಚ್ಚಾಟ ನಡೆಸಿದ ಕೇರಳದ ವಿದ್ಯಾರ್ಥಿಗಳು
ಮಂಗಳೂರು: ಕೇರಳದಿಂದ ಉಡುಪಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಗುಂಪೊಂದು ಹೆಜಮಾಡಿ ಟೋಲ್ ಬಳಿ ಪುಂಡಾಟ ನಡೆಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಎರಡು ಬಸ್ಸುಗಳಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ಟೋಲ್ಗೇಟ್ ಬಳಿ ಬಸ್ ನಿಲ್ಲಿಸಿ ಮದ್ಯ ಸೇವಿಸಿ, ರಸ್ತೆಯ ಮಧ್ಯದಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾರೆ. ಇವರ ಈ ಕಿರಿಕ್ ಮತ್ತು ಪುಂಡಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಇಂತಹ ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವುದಲ್ಲದೆ, ಸ್ಥಳೀಯ ಕಾನೂನು ಸುವ್ಯವಸ್ಥೆಗೂ ಭಂಗ ತರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಉಡುಪಿಗೆ ಪ್ರವಾಸಕ್ಕೆಂದು ಕೇರಳದಿಂದ ಎರಡು ಬಸ್ಗಳಲ್ಲಿ ಬಂದಿದ್ದ ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಟೋಲ್ಗೇಟ್ ಬಳಿ ಬಸ್ಗಳನ್ನು ನಿಲ್ಲಿಸಿದ ವಿದ್ಯಾರ್ಥಿಗಳು, ರಸ್ತೆಗಿಳಿದು ನೃತ್ಯ ಮಾಡಲು ಮತ್ತು ಪಟಾಕಿ ಸಿಡಿಸಲು ಆರಂಭಿಸಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ವರದಿಯಾಗಿದೆ.
ಜನನಿಬಿಡ ಈ ರಸ್ತೆಯಲ್ಲಿ ವಿದ್ಯಾರ್ಥಿಗಳ ಈ ಬೇಜವಾಬ್ದಾರಿ ವರ್ತನೆಯು ಸಾರ್ವಜನಿಕರಲ್ಲಿ ಸುರಕ್ಷತೆಯ ಬಗ್ಗೆ ಆತಂಕ ಸೃಷ್ಟಿಸಿದೆ. ವಿದ್ಯಾರ್ಥಿಗಳ ಈ ವರ್ತನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
























