ಗಂಭೀರ ಗಾಯಗೊಂಡಿದ್ದ ನಾದಿನಿಯ ಪತಿಯೂ ಸಾವು
ಮಂಗಳೂರು: ತಲಪಾಡಿ ಸಮೀಪ ತೂಮಿನಾಡಿನಲ್ಲಿ ಕುಟುಂಬದ ಆಸ್ತಿ ಕಲಹದಲ್ಲಿ ಗಾಯಗೊಂಡಿದ್ದ ಇನ್ನೋರ್ವ ವ್ಯಕ್ತಿಯೂ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇದರೊಂದಿಗೆ ಕೊಲೆಯಾದವರ ಸಂಖ್ಯೆ ಎರಡಕ್ಕೇರಿದೆ.
ಮಂಜೇಶ್ವರ ತೂಮಿನಾಡುವಿನ ಹಿಲ್ಟಾಪ್ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದ ಕುಟುಂಬ ಕಲಹದಲ್ಲಿ ಕೊಲೆಗಳು ಸಂಭವಿಸಿವೆ. ಮಾರಣಾಂತಿಕವಾಗಿ ಇರಿತಕ್ಕೆ ಒಳಗಾಗಿದ್ದ ಶೇಕುಂಞಿ ಎಂಬವರು ಫೆ.3ರಂದು ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರ ಪತ್ನಿಯ ಅಕ್ಕನ ಮಗಳು ಜುಮೈಲಾ(17) ಸೋಮವಾರ ಸಂಜೆ ಕೊಲೆಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಕೊನೆಯುಸಿರೆಳೆದಿದ್ದಾರೆ. ಜುಲೈಲಾ ಅವರ ತಂದೆ ಉಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದಾನೆ.
ಕುಟುಂಬ ಕಲಹ, ಆಸ್ತಿ ವಿಚಾರವಾಗಿ ಉಮರ್ ಫಾರೂಕ್ ಮತ್ತು ಆತನ ಪತ್ನಿಯ ತಂಗಿ(ನಾದಿನಿ)ಯ ಪತಿ ಶೇಕುಂಞಿ ಮಧ್ಯೆ ಈ ಮೊದಲೇ ವೈಮನಸ್ಸು ಇತ್ತೆನ್ನಲಾಗಿದೆ. ಇದೇ ವಿಚಾರವಾಗಿ ಸೋಮವಾರ ಸಂಜೆ ಉಮರ್ ಫಾರೂಕ್ ಮತ್ತು ಶೇಕುಂಞಿ ಮಧ್ಯೆ ನಡೆದ ವಾಗ್ವಾದ ತಾರಕಕ್ಕೇರಿದೆ. ಈ ವೇಳೆ ಶೇಕುಂಞಿಯವರ ಮೇಲೆ ಆರೋಪಿ ಉಮರ್ ಫಾರೂಕ್ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ದಾಳಿಯನ್ನು ತಡೆಯಲೆತ್ನಿಸಿದ ಪುತ್ರಿ ಜುಮೈಲಾರಿಗೂ ಉಮರ್ ಫಾರೂಕ್ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಜುಮೈಲಾ ಸ್ಥಳದಲ್ಲೇ ಮೃತಪಟ್ಟಿದ್ದರು.
ದಾಳಿಗೊಳಗಾಗಿ ಗಂಭೀರಾವಸ್ಥೆಯಲ್ಲಿದ್ದ ಶೇಕುಂಞಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣದ ಆರೋಪಿ ಉಮರ್ ಫಾರೂಕ್ ನನ್ನು ಪೊಲೀಸರು ಸೋಮವಾರ ಸಂಜೆಯೇ ಬಂಧಿಸಿದ್ದಾರೆ. ಉಮರ್ ಫಾರೂಕ್ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ವಿದೇಶದಲ್ಲಿದ್ದ ಈತ ಕೆಲ ತಿಂಗಳ ಹಿಂದೆ ಊರಿಗೆ ಬಂದಿದ್ದ.
























