ತೆರಿಗೆ ದಾಳಿ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯಮಿಯ ಸಾವಿನ ಸುತ್ತ ಅನುಮಾನದ ಹುತ್ತ
ಬೆಂಗಳೂರು: ರಿಯಲ್ ಎಸ್ಟೇಟ್ ಸಂಸ್ಥೆ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಭಾನುವಾರ ತಿಳಿಸಿದ್ದಾರೆ. ಜನವರಿ 30ರಂದು ಬೆಂಗಳೂರು ನಗರದ ಅಶೋಕನಗರ ವ್ಯಾಪ್ತಿಯಲ್ಲಿರುವ ಕಚೇರಿಯಲ್ಲಿ ರಾಯ್ ಅವರು ಗುಂಡಿನ ಗಾಯಗಳೊಂದಿಗೆ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಘಟನೆ ನಡೆದ ವೇಳೆ ಅವರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ಶೋಧ ಕಾರ್ಯ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪ್ರಕರಣವು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್ , ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ SIT ರಚಿಸಲಾಗಿದೆ. ತನಿಖೆ ಈಗಾಗಲೇ ಆರಂಭವಾಗಿದೆ. ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ. ತನಿಖೆ ಮುಗಿಯುವವರೆಗೆ ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಕೇರಳ ಮೂಲದವರಾದ ಸಿ.ಜೆ. ರಾಯ್ ಅಂತ್ಯಕ್ರಿಯೆ ಭಾನುವಾರ ಬನ್ನೇರುಘಟ್ಟ ಸಮೀಪದ ಕಾನ್ಫಡೆಂಟ್ ಕ್ಯಾಸ್ಕೇಡ್ನಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು.
ರಾಯ್ ಅವರ ಇಚ್ಛೆಯಂತೆ ಚರ್ಚ್ನಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಂತ್ಯಕ್ರಿಯೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಯ್ ಅವರ ಸಹೋದರ ಸಿ.ಜೆ. ಬಾಬು, “ಜನವರಿ 30ರ ಬೆಳಗ್ಗೆ 10.40ರ ವೇಳೆಗೆ ನಾನು ಥೈಲ್ಯಾಂಡ್ನಲ್ಲಿ ಇದ್ದಾಗ ರಾಯ್ ನನಗೆ ಕರೆ ಮಾಡಿದ್ದರು. ನಾನು ಯಾವಾಗ ವಾಪಸ್ ಬರುತ್ತೇನೆ ಎಂದು ಮಾತ್ರ ಕೇಳಿದರು. ಆ ವೇಳೆ ಯಾವುದೇ ಆದಾಯ ತೆರಿಗೆ ದಾಳಿ ಅಥವಾ ಒತ್ತಡದ ಬಗ್ಗೆ ಅವರು ಹೇಳಿರಲಿಲ್ಲ ಎಂದು ಹೇಳಿದರು.
ರಾಯ್ ಜನವರಿ 27ರಂದು ಬೆಂಗಳೂರಿಗೆ ಬಂದಿದ್ದು, ಹೋಟೆಲ್ನಲ್ಲಿ ತಂಗಿದ್ದರು. ನಾನು ಜನವರಿ 28ರಂದು ಮದುವೆಗೆ ಹೊರಟಿದ್ದೆ. SIT ತನಿಖೆಯಿಂದ ಏನು ಹೊರಬರುತ್ತದೆ ಎಂಬುದನ್ನು ಕಾದು ನೋಡೋಣ ಎಂದು ತಿಳಿಸಿದರು.
























