ಪಿಲಿಕುಳ ಜೈವಿಕ ಪಾರ್ಕ್‌ ಅವ್ಯವಸ್ಥೆ : ಹೈಕೋರ್ಟ್‌ ಕೆಂಡಾಮಂಡಲ

ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಜಡ್ಜ್‌ ಶಾಕ್‌

ಮಂಗಳೂರು: ಮಂಗಳೂರು ನಗರದ ಹೊರವಲಯದಲ್ಲಿರುವ ಪಿಲಿಕುಳ ಜೈವಿಕ ಪಾರ್ಕ್‌ನಲ ಅವ್ಯವಸ್ಥೆ ಕಂಡು ಹೈಕೋರ್ಟ್‌ ಗರಂ ಆಗಿದೆ. ಪ್ರಾಣಿಗಳ ದಯನೀಯ ಸ್ಥಿತಿಗೆ ಕೆಂಡಾಮಂಡಲವಾಗಿರುವ ನ್ಯಾಯಪೀಠ ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ತಕ್ಷಣ ಮೃಗಾಲಯ ಬಂದ್ ಮಾಡಿ ಎಂದು ಸರ್ಕಾರಕ್ಕೆ ಹೇಳಿದೆ.

ಸುಮಾರು 370 ಎಕರೆಗಳಷ್ಟು ವಿಶಾಲವಾಗಿ ಹಬ್ಬಿರುವ ಈ ಮೃಗಾಲಯ ದೇಶದ ಅತ್ಯಂತ ನೈಸರ್ಗಿಕವಾದ ಮೃಗಾಲಯಗಳಲ್ಲಿ ಒಂದು ಎಂದು ಹೆಸರುವಾಸಿ. ಒಂದು ಕಾಲದಲ್ಲಿ ಹುಲಿಗಳು ಬಂದು ನೀರು ಕುಡಿಯುತ್ತಿದ್ದ ಈ ಜಾಗವನ್ನ ಇಂದು ಅಂತಾರಾಷ್ಟ್ರೀಯ ಮಟ್ಟದ ಜೈವಿಕ ಉದ್ಯಾನವನವಾಗಿ ರೂಪಿಸಲಾಗಿದೆ. ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರುವ ಪಿಲಿಕುಳ, ಕರಾವಳಿಗೆ ಬರುವ ಪ್ರವಾಸಿಗರ ಮೊದಲ ಆಯ್ಕೆ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಪಿಲಿಕುಳದ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂದರೆ ಇಲ್ಲಿನ ಅವ್ಯವಸ್ಥೆ, ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಧೀಶರೇ ಶಾಕ್ ಆಗಿದ್ದಾರೆ.





















































 
 

ತುಕ್ಕು ಹಿಡಿದ ಪಂಜರ, ಕಲುಷಿತ ನೀರು, ಕೊಳಕು ವಾತಾವರಣ, ಪ್ರಾಣಿಗಳಿಗೆ ಸರಿಯಾಗಿ ಆಹಾರ ನೀಡದಿರುವುದು ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪಿಲಿಕುಳ ಮೃಗಾಲಯದ ಕರ್ಮಕಾಂಡಗಳು ಹೈಕೋರ್ಟ್‍ನಲ್ಲಿ ಹೊರಬಿದ್ದಿವೆ. ಪ್ರಾಣಿಗಳನ್ನು ಇರಿಸಿರುವ ಪಂಜರಗಳು ಸಂಪೂರ್ಣ ತುಕ್ಕು ಹಿಡಿದಿವೆ, ಅಲ್ಲಿ ಸರಿಯಾದ ಭದ್ರತೆಯೇ ಇಲ್ಲ. ಕೊಳಕು ಪರಿಸರದಲ್ಲಿ ಪ್ರಾಣಿಗಳು ನರಳುತ್ತಿರುವ ಫೋಟೋಗಳನ್ನು ನೋಡಿ ನ್ಯಾಯಪೀಠ ಕೆಂಡಾಮಂಡಲವಾಗಿದೆ.

ಈ ಪಾರ್ಕ್‍ನ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೆ ಮುಕ್ತಾಯವಾಗಿದೆ. ಸದ್ಯ ಯಾವುದೇ ಪರವಾನಗಿ ಇಲ್ಲದೆ ಪಿಲಿಕುಳ ಮೃಗಾಲಯ ನಡೆಯುತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದರೂ ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಮಲಿನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿವೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಪರವಾನಗಿ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗಿದೆ. ಅದು ಪರಿಶೀಲನೆಯಲ್ಲಿದೆ ಎಂದು ಸಮರ್ಥನೆ ನೀಡಿದ್ದಾರೆ. ನ್ಯಾಯಾಲಯ ಇದನ್ನು ಒಪ್ಪಿಲ್ಲ. ಪ್ರಾಣಿಗಳಿಗೆ ರಕ್ಷಣೆ ನೀಡಲಾಗದಿದ್ದರೆ ಅದನ್ನು ಮುಚ್ಚಿಬಿಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಫೆಬ್ರವರಿ 5ಕ್ಕೆ ಅರ್ಜಿಯ ವಿಚಾರಣೆ ಮುಂದೂಡಲಾಗಿದೆ.

error: Content is protected !!
Scroll to Top