ಬಸ್‌ ನಿಲ್ದಾಣಗಳಲ್ಲಿ ಬ್ಯಾಗ್‌ ಕಳ್ಳತನ ಮಾಡುತ್ತಿದ್ದ ಕಳ್ಳ ಸೆರೆ

ಮಂಗಳೂರು: ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್‌ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ಬಂಧಿಸಿ 46.28 ಗ್ರಾಂ ತೂಕದ 6,47,920 ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಮಡಿಕೇರಿಯ ತ್ಯಾಗರಾಜ್ ಕಾಲೋನಿ ನಿವಾಸಿ ಮಹಮ್ಮದ್ ಇಮ್ರಾನ್ ಎನ್.ಎಂ(44) ಎಂದು ಗುರುತಿಸಲಾಗಿದೆ.

ಆರೋಪಿಯು ಬಸ್ ನಿಲ್ದಾಣಗಳಲ್ಲಿ ಒಟ್ಟು 11 ಬ್ಯಾಗ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಆತನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಯನ್ನು ಜ.28ರಂದು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ಬಳಿಯಲ್ಲಿ ದಸ್ತಗಿರಿ ಮಾಡಿ 6,47,920 ರೂ. ಬೆಲೆಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆಗಳನ್ನು 5,000 ರೂ. ನಗದು ಸ್ವಾಧೀನಪಡಿಸಿಕೊಳ್ಳಲಾಯಿತು. ಜ.29ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಜ.23ರಂದು ಸಂಜೆ ಇಬ್ಬರು ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಸೇರಿದ ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಸುಮಾರು 45 ಗ್ರಾಂ ಚಿನ್ನಾಭರಣ ಹಾಗೂ 20,000 ರೂ. ನಗದು ಹಣ ಇರುವ ಬ್ಯಾಗ್ ಕಳ್ಳತನವಾಗಿತ್ತು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.





















































 
 

ಬಂಧಿತ ಆರೋಪಿ ಬಸ್ ನಿಲ್ದಾಣಗಳಲ್ಲಿ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್‌ಗಳನ್ನು ಕಳ್ಳತನ ಮಾಡುತ್ತಿದ್ದು, ಈತನ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿದೆ. ದುದ್ದ ಪೊಲೀಸ್ ಠಾಣೆ, ಕೊಮನೂರು ಪೊಲೀಸ್ ಠಾಣೆ, ಹಾಸನ ಬಡಾವಣೆ ಪೊಲೀಸ್ ಠಾಣೆ, ಹಾಸನ ನಗರ ಪೊಲೀಸ್ ಠಾಣೆ, ಚೆನ್ನರಾಯಪಟ್ಟಣ ನಗರ ಠಾಣೆ, ಮೈಸೂರು ದೇವರಾಜ ನಗರ ಪೊಲೀಸ್ ಠಾಣೆಯಲ್ಲಿ ತಲಾ 1 ಬ್ಯಾಗ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಹಾಸನ ಜಿಲ್ಲೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ- 1, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ -2, ಹಾಸನ ಜಿಲ್ಲೆ ದುದ್ದ ಪೊಲೀಸ್ ಠಾಣೆಯಲ್ಲಿ-1 ಮನೆ ಕಳ್ಳತನ ಪ್ರಕರಣ ದಾಖಲಾಗಿದೆ. ಆರೋಪಿ ಹಾಸನ ಜಿಲ್ಲೆಯ ಮನೆಕಳವು ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ. ಬಳಿಕ ಪ್ರಕರಣದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ನ್ಯಾಯಾಲಯವು ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು.

error: Content is protected !!
Scroll to Top