ತಿರುವನಂತಪುರಂ: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಲೆಯಾಳಂನ ಹೆಸರಾಂತ ನಟ ಜಯರಾಮ್ ಅವರ ಹೇಳಿಕೆಯನ್ನು ವಿಶೇಷ ತನಿಖಾ ತಂಡ ದಾಖಲಿಸಿಕೊಂಡಿದೆ. ಚೆನ್ನೈ ನಲ್ಲಿರುವ ಜಯರಾಮ್ ನಿವಾಸಕ್ಕೆ ತೆರಳಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿದೆ.
ಈ ಪ್ರಕರಣದ ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ ಜೊತೆಗೆ ಜಯರಾಮ್ ಅವರ ಸಂಬಂಧ ಏನು ಎಂಬುದನ್ನು SIT ಅಧಿಕಾರಿಗಳು ಪ್ರಶ್ನೆ ಮಾಡಿದ್ದು, ಪೊಟ್ಟಿ ತನ್ನ ಮನೆಯ ಪೂಜಾ ಕಾರ್ಯಕ್ರಮಗಳಿಗೆ ಆಗಾಗ ಬರುತ್ತಿದ್ದರು. ಆದರೆ ಅವರ ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ನನಗೆ ಮಾಹಿತಿ ಇಲ್ಲ. ಹಾಗೆಯೇ ಕಟಿಲಪಾಳಿ ಸ್ಮಾರ್ಟ್ ಕ್ರಿಯೇಶನ್‌ನಲ್ಲಿ ನಡೆದ ಪೂಜಾ ಕಾರ್ಯಕ್ರಮ ಮತ್ತು ಇಳಂಪಳ್ಳಿ ದೇಗುಲದ ದ್ವಾರ ಘೋಷಯಾತ್ರೆಯಲ್ಲಿ ಪೊಟ್ಟಿ ಅವರ ಆಹ್ವಾನದ ಮೇರೆೆಗೆ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿ ಗೋವರ್ಧನ್‌ನ ಪರಿಚಯವಾಗಿತ್ತು ಎಂದು ಅಧಿಕಾರಿಗಳಿಗೆ ಜಯರಾಮ್ ಮಾಹಿತಿ ನೀಡಿದ್ದಾರೆ.
ಜಯರಾಮ್ ಅವರನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸುವ ಬಗೆಗೂ SIT ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಶಬರಿಮಲೆಗೆ ಸಂಬಂಧಿಸಿದ ಕಾರ್ಯಗಳಿಗೆ ಬಳಸಲು ದೇವಸ್ವಂ ಬೋರ್ಡ್ ಆರೋಪಿ ಪೊಟ್ಟಿಗೆ 14 ಚಿನ್ನದ ಗಟ್ಟಿಗಳನ್ನು ನೀಡಿದ್ದು, ಇದನ್ನು 2019 ರಲ್ಲಿ ಜಯರಾಮ್ ಮನೆಗೆ ತಂದು ವಿಶೇಷ ಪೂಜೆ ನಡೆಸಲಾಗಿದೆ. ಈ ಚಿನ್ನದ ಗಟ್ಟಿಗಳಿಗೆ ಚೆನ್ನೈಯಲ್ಲಿ ಚಿನ್ನದ ಲೇಪನ ಮಾಡಲಾಗಿದ್ದು, ಶಬರಿಮಲೆಯ ದ್ವಾರಪಾಲಕ ಶಿಲ್ಪಗಳ ರೂಪದಲ್ಲಿ ಜಯರಾಮ್ ಅವರ ಮನೆಯಲ್ಲಿ ಪೂಜಿಸಲಾಗಿದೆ ಎಂದು ಎಸ್‌ಐಟಿ ತನಿಖೆಯಲ್ಲಿ ಪತ್ತೆ ಮಾಡಿದೆ. ದೇವಸ್ವಂ ಬೋರ್ಡ್ ಅನುಮತಿ ಮೇರೆಗೆ ಪೊಟ್ಟಿಯವರ ಬಳಿ ಇದ್ದ ಖಾಸಗಿ ಪೂಜಾ ಕಾರ್ಯಕ್ರಮಗಳಿಗೆ ಚಿನ್ನವನ್ನು ಬಳಸಲಾಗಿದೆ ಎನ್ನುವುದು ತನಿಖೆಯ ಪ್ರಮುಖ ಅಂಶವಾಗಿದೆ.
ಚಾರ್ಜ್ ಶೀಟ್ ವಿಳಂಬ ಮಾಡುತ್ತಿರುವ ಆರೋಪ
ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಲ್ಲಿ SIT ಗಂಭೀರ ವಿಳಂಬ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಬಂಧಿತ 12 ಆರೋಪಿಗಳಲ್ಲಿ 9 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸರ್ಕಾರದ ಪ್ರಾಸಿಕ್ಯೂಷನ್ ಅನುಮತಿ ಅಗತ್ಯವಿದ್ದು, ಇದುವರೆಗೆ ಅನುಮತಿ ಕೇಳಲಾಗಿಲ್ಲ ಎನ್ನಲಾಗಿದೆ. ಈ ವಿಳಂಬವನ್ನು ಆಧಾರವಾಗಿಸಿ ಎನ್. ವಾಸು ಸೇರಿದಂತೆ ಕೆಲವು ಆರೋಪಿಗಳು ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನಿಖಾ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಆರೋಪಿಗಳಿಗೆ ಲಾಭವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ
























