ಯಾವಾಗ, ಯಾವ ಉಡುಪು ಧರಿಸಬೇಕೆಂದು ಸೂಚಿಸಿದ ಸರ್ಕಾರ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೂ ಡ್ರೆಸ್ ಕೋಡ್ ಜಾರಿ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರಿ ನೌಕರರು ಸ್ವಯಂಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವುದಲ್ಲದೆ, ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಖಾದಿ ಉಡುಪನ್ನು ಧರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಅವರು, ಖಾದಿ ಕೇವಲ ಒಂದು ಉಡುಪು ಮಾತ್ರವಲ್ಲ, ಅದು ರಾಷ್ಟ್ರದ ಗೌರವ ಮತ್ತು ಹೆಮ್ಮೆಯ ಪ್ರತೀಕವಾಗಿದೆ. ಪ್ರಸ್ತುತ ಖಾದಿ ನೇಕಾರರು ನೂತನ ಶೈಲಿಯ ವಿನ್ಯಾಸದಲ್ಲಿ ಉಡುಪುಗಳನ್ನು ತಯಾರಿಸಲು ಮುಂದಾಗಿದ್ದಾರೆ. ಖಾದಿ ಉತ್ಪಾದನೆಯು ಗ್ರಾಮೀಣ ಆರ್ಥಿಕತೆಯ ಮೂಲ ಆಧಾರವಾಗಿದ್ದು, ರಾಜ್ಯದ ಸಾವಿರಾರು ಗ್ರಾಮೀಣ ನೂಲುಗಾರರು ಮತ್ತು ನೇಕಾರರಿಗೆ ನೇರ ಹಾಗೂ ಪರೋಕ್ಷವಾಗಿ ಜೀವನೋಪಾಯವನ್ನು ಒದಗಿಸುತ್ತಿದೆ. ಆದುದರಿಂದ, 77ನೇ ಗಣರಾಜ್ಯೋತ್ಸವದ ಶುಭಸಂದರ್ಭದಲ್ಲಿ ಸಾರ್ವಜನಿಕ ಸೇವೆಯನ್ನು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಮರುಸಂಪರ್ಕಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಖಾದಿ ಬಳಕೆಯನ್ನು ಉತ್ತೇಜಿಸಲು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಸಂಸ್ಥೆಗಳು, ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಅಧಿಕಾರಿ, ನೌಕರರುಗಳು “ಸ್ವಯಂ ಪ್ರೇರಣೆಯಿಂದ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವುದು, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಎಲ್ಲ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪನ್ನು ಧರಿಸುವಂತೆ ತಮ್ಮ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಕ್ರಮವು ಸರ್ಕಾರಿ ಅಧಿಕಾರಿ, ನೌಕರರುಗಳಲ್ಲಿ ಸ್ವದೇಶಿ ಉತ್ಪನ್ನಗಳ ಬಗ್ಗೆ ಗೌರವ, ಐಕ್ಯತೆ, ರಾಷ್ಟ್ರೀಯ ಭಾವನೆ, ಭಾರತೀಯತೆ, ಸ್ವಾಭಿಮಾನ ಮತ್ತು ಸಾಮಾಜಿಕ ಜವಾಬ್ದಾರಿಯ ಭಾವನೆಯನ್ನು ಬೆಳೆಸುವಲ್ಲಿ ಸಹಾಯಕವಾಗಲಿದೆ ಎಂದು ಭಾವಿಸಿದೆ. ಎಲ್ಲ ಜಿಲ್ಲೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 176 ಖಾದಿ ಸಂಘ-ಸಂಸ್ಥೆಗಳ ಹೆಸರು, ವಿಳಾಸ ಹಾಗೂ ಉತ್ಪನ್ನಗಳ ವಿವರಗಳನ್ನು https://khadi.karnataka.gov.in ದಲ್ಲಿ ಪಡೆಯಬಹುದಾಗಿದೆ ಎಂದು ಸೂಚಿಸಿದ್ದಾರೆ.
























