ಸಿಕ್ಕಾಪಟ್ಟೆ ಏರಿಕೆಯಾದ ಚಿನ್ನ, ಬೆಳ್ಳಿ ಬೆಲೆಯಿಂದ ಜನ ಕಂಗಾಲು
ಬೆಂಗಳೂರು: ಚಿನ್ನದ ಬೆಲೆ ಗಗನಕ್ಕೇರಿ ಬಡವರ ಪಾಲಿಗೆ ಮರೀಚಿಕೆಯಾಗಿದ್ದು, ವ್ಯಕ್ತಿಯೊಬ್ಬರು ಕೊನೆಗೆ ಚಿನ್ನದ ಬೆಲೆ ಇಳಿಸಲು ದೇವರಿಗೇ ಮೊರೆ ಹೋಗಿದ್ದಾರೆ! ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ನಳ್ಳಿ ಗ್ರಾಮದ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಭಕ್ತರೊಬ್ಬರು ಚಿನ್ನದ ಬೆಲೆ ಇಳಿಯಲಿ ಎಂದು ಕೋರಿ ಸಲ್ಲಿಸಿರುವ ವಿಭಿನ್ನ ಹರಕೆ ಇದೀಗ ಎಲ್ಲರ ಗಮನ ಸೆಳೆದಿದೆ.
ಭಕ್ತ ಕೆ.ನಾಗರಾಜ ಉಲವತ್ತಿ ಎಂಬವರು, ಚಿನ್ನದ ದರ ಇಳಿಯಲಿ, ಬಡವರು ಹಾಗೂ ಸಾಮಾನ್ಯ ಜನರೂ ಚಿನ್ನ ಖರೀದಿಸಲು ಸಾಧ್ಯವಾಗಲಿ ಎಂಬ ಆಶಯದೊಂದಿಗೆ ದೇವಿಯ ಮುಂದೆ ಹರಕೆ ಸಲ್ಲಿಸಿದರು. ತಾಯಿಯ ರಥೋತ್ಸವದ ವೇಳೆ ನಾಗರಾಜ ಉಲವತ್ತಿ ಬಾಳೆಹಣ್ಣಿನ ಮೇಲೆ ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ ಎಂದು ಬರೆದು ಭಕ್ತಿಪೂರ್ವಕವಾಗಿ ದೇವಿಗೆ ಅರ್ಪಿಸಿದರು. ಈ ವಿಭಿನ್ನ ಭಕ್ತಿ ಪ್ರದರ್ಶನ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರ ಗಮನ ಸೆಳೆಯಿತು.
ಚಿಮ್ನಳ್ಳಿ ದುರ್ಗಮ್ಮ ಜಾತ್ರೆಯಲ್ಲಿ ಭಕ್ತರ ಮಹಾಪೂರವೇ ಹರಿದು ಬರುತ್ತಿರುವ ಸಂದರ್ಭದಲ್ಲಿ, ನಾಗರಾಜ ಅವರ ಈ ವಿಶಿಷ್ಟ ಹರಕೆ ವಿಶೇಷ ಚರ್ಚೆಗೆ ಕಾರಣವಾಯಿತು. ದೇವಿಯ ಕೃಪೆಯಿಂದ ಚಿನ್ನದ ಬೆಲೆ ಇಳಿದು, ಸಾಮಾನ್ಯ ಜನರಿಗೂ ಚಿನ್ನದ ಕನಸು ನನಸಾಗಲಿ ಎಂಬ ಹಾರೈಕೆಯನ್ನು ಅನೇಕ ಭಕ್ತರು ವ್ಯಕ್ತಪಡಿಸಿದರು. ದೇಶಾದ್ಯಂತ ಚಿನ್ನದ ಬೆಲೆ ಏರಿಕೆಯಿಂದ ಸಾಮಾನ್ಯ ಜನರಲ್ಲಿ ಆತಂಕ ಹೆಚ್ಚಿರುವ ಈ ಸಂದರ್ಭದಲ್ಲಿ, ಭಕ್ತಿಪೂರ್ಣವಾಗಿ ವ್ಯಕ್ತವಾದ ಈ ಆಶಯ ಸಾಮಾಜಿಕವಾಗಿ ಕೂಡ ಗಮನ ಸೆಳೆದಿದೆ.
ಸಿಕ್ಕಾಪಟ್ಟೆ ಏರಿಕೆಯಾದ ಚಿನ್ನ, ಬೆಳ್ಳಿ ಬೆಲೆ
ಚಿನ್ನದ ಮತ್ತು ಬೆಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದ್ದು, ಜನರು ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸಲು ಸಾಧ್ಯವಾಗದೆ ಚಿಂತೆಗೊಳಗಾಗಿದ್ದಾರೆ. ಬೆಳ್ಳಿ ಕೆಜಿಗೆ 3.85 ಲ.ರೂ. ತನಕ ತಲುಪಿದೆ. ಚಿನ್ನ ಕಳೆದ ಕೆಲವು ಸಮಯದಿಂದ 10 ಗ್ರಾಂಗೆ 16,000 ರೂ. ಆಸುಪಾಸಿನಲ್ಲೇ ಇದೆ. ಈ ಸಿಕ್ಕಾಪಟ್ಟೆ ಏರಿಕೆ ಚಿನ್ನಪ್ರಿಯರಾದ ಭಾರತೀಯರನ್ನು ಬಹಳ ಚಿಂತೆಗೀಡು ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣಗಳು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಚಿನ್ನದ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
























