ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೈದ್ಯರುಗಳು ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸುವಂತಹ ಮಹತ್ವದ ನಿರ್ಧಾರವನ್ನು ಕರ್ನಾಟಕ ಸರ್ಕಾರ ತೆಗೆದುಕೊಂಡಿದೆ.
ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದು, ಸರ್ಕಾರದ ಅದೇಶದ ಪ್ರಕಾರ ಪ್ರಸ್ತುತ ಸರ್ಕಾರಿ ವೈದ್ಯರು ತಮ್ಮ ಕೆಲಸದ ಅವಧಿ ಮುಗಿದ ಬಳಿಕ ಖಾಸಗಿಯಾಗಿಯೂ ಸೇವೆ ಸಲ್ಲಿಸುವ ಅವಕಾಶ ಇದೆ. ಆದರೆ ಈಗ ಈ ಆದೇಶವನ್ನು ಮಾರ್ಪಾಡು ಮಾಡಲಾಗಿದ್ದು, ಸರ್ಕಾರಿ ವೈದ್ಯರು ಕೇವಲ ಹೊರ ರೋಗಿಗಳಿಗೆ ಮಾತ್ರವೇ ಚಿಕಿತ್ಸೆ ನೀಡಬಹುದು ಎಂದು ಹೇಳಲಾಗಿದೆ. ಖಾಸಗಿ ಸೇವೆಯ ಸಮಯದಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ ಎಂದು ಹೇಳಲಾಗಿದೆ.
ಒಳರೋಗಿಗಳಿಗೆ ನಿರಂತರ ಆರೈಕೆ, ಪರೀಕ್ಷೆಯ ಅಗತ್ಯತೆ ಇರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ಸೇವೆಯಲ್ಲಿ ಸರ್ಕಾರಿ ವೈದ್ಯರು ತೊಡಗಿಕೊಂಡರೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ನೀಡುವ ಸೇವೆಯಲ್ಲಿ ಏರುಪೇರಾಗುವ, ಅವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳಾಗುವ ಸಾಧ್ಯತೆಗಳೂ ಇವೆ. ಕೆಲವು ಸಂದರ್ಭಗಳಲ್ಲಿ ರೋಗಿಗಳ ಸಾವಿಗೂ ಇದು ಕಾರಣವಾಗಬಹುದು. ಆದ್ದರಿಂದ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರುವುದಾಗಿದೆ.
ಸಾರ್ವಜನಿಕವಾಗಿ ಸೇವೆ ಮಾಡಬೇಕಾದರೆ ಸರ್ಕಾರಿ ವೈದ್ಯರ ಖಾಸಗಿ ಸೇವೆಯನ್ನು ನಿಯಂತ್ರಿಸಬೇಕಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಸರ್ಕಾರಿ ವೈದ್ಯರು ತಾವು ಖಾಸಗಿಯಾಗಿ ಸೇವೆ ಸಲ್ಲಿಸುತ್ತಿರುವ ಬಗೆಗಿನ ಮಾಹಿತಿಯನ್ನು, ವಿವರಗಳನ್ನು ಸಹ ಸರ್ಕಾರಕ್ಕೆ ಘೋಷಿಸುವಂತೆ ಸೂಚಿಸಲಾಗಿದೆ. ಈ ಕಾನೂನು ಉಲ್ಲಂಘಿಸಿದ ಸರ್ಕಾರಿ ವೈದ್ಯರುಗಳ ಮೇಲೆ ಶಿಸ್ತು ಕ್ರಮ, ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
























