4ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 50 ರನ್‌ ಸೋಲು

ವ್ಯರ್ಥವಾದ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್‌

ವಿಶಾಖಪಟ್ಟಣ : ಇಲ್ಲಿನ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 4ನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನ್ಯೂಜಿಲೆಂಡ್ ತಂಡ ಕೊನೆಗೂ ಈ ಟಿ20 ಸರಣಿಯಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಸರಣಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್ 215 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 165 ರನ್​ಗಳಿಗೆ ಆಲೌಟ್ ಆಗುವ ಮೂಲಕ 50 ರನ್​ಗಳಿಂದ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಶಿವಂ ದುಬೆ 23 ಎಸೆತಗಳಲ್ಲಿ 65 ರನ್ ಬಾರಿಸುವ ಮೂಲಕ ಎದುರಾಳಿ ತಂಡದಲ್ಲಿ ಸೋಲಿನ ಭಯ ಹುಟ್ಟಿಸಿದ್ದರು. ಆದರೆ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 215 ರನ್‌ ಕಲೆಹಾಕಿತು. ತಂಡದ ಪರ ಆರಂಭಿಕ ಟಿಮ್ ಸೀಫರ್ಟ್ 36 ಎಸೆತಗಳಲ್ಲಿ 62 ರನ್ ಗಳಿಸಿದರೆ, ಡೆವೊನ್ ಕಾನ್ವೇ 23 ಎಸೆತಗಳಲ್ಲಿ 44 ರನ್ ಗಳಿಸಿ ಉಪಯುಕ್ತ ಇನ್ನಿಂಗ್ಸ್ ಆಡಿದರು. ಈ ಇಬ್ಬರೂ ಮೊದಲ ವಿಕೆಟ್‌ಗೆ ತ್ವರಿತ ಆರಂಭವನ್ನು ನೀಡಿದರು. ನಂತರ, ಡ್ಯಾರಿಲ್ ಮಿಶೆಲ್ 18 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ಸ್ಕೋರ್ ಅನ್ನು 200 ರನ್​ಗಳ ಗಡಿ ದಾಟಿಸಿದರು. ಭಾರತದ ಪರ, ಆರ್ಷದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರಾದರೂ, ಒಟ್ಟಾರೆಯಾಗಿ ಭಾರತದ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳ ವೇಗಕ್ಕೆ ಕಡಿವಾಣ ಹಾಕಲು ವಿಫಲರಾದರು.





















































 
 

ಈ ಗುರಿ ಬೆನ್ನಟ್ಟಿದ ಭಾರತ ಕಳಪೆ ಆರಂಭವನ್ನು ಕಂಡಿತು. ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ಔಟಾದರೆ, ನಾಯಕ ಸೂರ್ಯಕುಮಾರ್ ಯಾದವ್ ಕೂಡ ಬೇಗನೆ ನಿರ್ಗಮಿಸಿದರು. ಅಗ್ರ ಕ್ರಮಾಂಕ ಕುಸಿದ ನಂತರ ಶಿವಂ ದುಬೆ ಮತ್ತೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಫೋಟಕ ಫಾರ್ಮ್ ಪ್ರದರ್ಶಿಸಿ 23 ಎಸೆತಗಳಲ್ಲಿ 65 ರನ್ ಗಳಿಸಿದರು. ಆದರೆ ದುಬೆಗೆ ಇತರ ಬ್ಯಾಟ್ಸ್‌ಮನ್‌ಗಳಿಂದ ಬೆಂಬಲ ಸಿಗಲಿಲ್ಲ. ರಿಂಕು ಸಿಂಗ್ 30 ಎಸೆತಗಳಲ್ಲಿ 39 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ ಕೇವಲ 24 ರನ್ ಗಳಿಸಿದರು. ಕೊನೆಯಲ್ಲಿ, ಭಾರತ ತಂಡ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು.

ನ್ಯೂಜಿಲೆಂಡ್ ಪರ ನಾಯಕ ಮಿಶೆಲ್ ಸ್ಯಾಂಟ್ನರ್ ಮೂರು ವಿಕೆಟ್ ಪಡೆದರೆ, ಇಶ್ ಸೋಧಿ ಮತ್ತು ಜಾಕೋಬ್ ಡಫಿ ಕೂಡ ತಲಾ ಎರಡು ವಿಕೆಟ್ ಪಡೆದರು. ಈ ಗೆಲುವು ಸರಣಿಯಲ್ಲಿ ನ್ಯೂಜಿಲೆಂಡ್‌ನ ಗೌರವವನ್ನು ಉಳಿಸಿದ್ದಲ್ಲದೆ, ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು.

error: Content is protected !!
Scroll to Top