ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಆರೋಪಿಗೆ ಅಡಗಿಕೊಳ್ಳಲು ಮಂಗಳೂರಿನಲ್ಲಿ ಆಶ್ರಯ ನೀಡಿದ ಉದ್ಯಮಿ
ಮಂಗಳೂರು : ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮುಂಖಂಡ ರಾಜೀವ್ ಗೌಡನಿಗೆ ತಲೆಮರೆಸಿಕೊಳ್ಳಲು ಸಹಕರಿಸಿದ್ದ ಮಂಗಳೂರಿನ ಉದ್ಯಮಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಮಂಗಳವಾರ ರಾಜೀವ್ ಗೌಡನ ಜೊತೆಗೆ ಉದ್ಯಮಿಯನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ರಾಜೀವ್ ಗೌಡನಿಗೆ 14 ದಿನಗಳ ಕಸ್ಟಡಿ ವಿಧಿಸಿದೆ. ಉದ್ಯಮಿ ಮೈಕಲ್ ಜೋಸೇಫ್ ರೆಗೋಗೆ ಜಾಮೀನು ನೀಡಿದೆ.
ಮೈಕಲ್ ಜೋಸೇಫ್ ರೆಗೋಗೆ ಸೇರಿದ್ದ ಪಚ್ಚನಾಡಿಯ ಬಳಿಯಿರುವ ಜೆ.ಕೆ ಫಾರ್ಮ್ ಹೌಸ್‌ನಲ್ಲಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ. ಈ ಮಾಹಿತಿ ತಿಳಿದು ಚಿಕ್ಕಬಳ್ಳಾಪುರ ಪೊಲೀಸರು ಅಲ್ಲಿಗೆ ಹೊರಟಿದ್ದರು. ಈ ವಿಚಾರ ತಿಳಿದು ರಾಜೀವ್ ಗೌಡ, ತನ್ನ ಕಾರನ್ನು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಮೈಕಲ್‌ನ ಕಾರಿನಲ್ಲಿ ಕೇರಳಕ್ಕೆ ತೆರಳಿದ್ದ. ಅವನನ್ನು ಪೊಲೀಸರು ಕೇರಳದ ಗಡಿಯಲ್ಲಿ ಬಂಧಿಸಿದ್ದರು.
ಸಚಿವ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡಗೆ ರಾಜೀವ್ ಗೌಡ ಧಮ್ಕಿ ಹಾಕಿದ್ದ. ಧಮ್ಕಿ ಹಾಕಿದ್ದ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕ್ಷಮೆ ಕೋರಿದ್ದ. ಆದರೆ ಅಮೃತ ಗೌಡ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ ಬಳಿಕ ಪರಾರಿಯಾಗಿದ್ದ ರಾಜೀವ್ ಜಾಮೀನು ಪಡೆಯಲು ನಾನಾ ಕಸರತ್ತು ನಡೆಸಿದ್ದ. ಕೋರ್ಟ್ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ ಬಂಧನ ಯಾವಾಗ ಎಂದು ಮಾಧ್ಯಮಗಳು ಸರ್ಕಾರವನ್ನು ಪ್ರಶ್ನಿಸುತ್ತಿದ್ದವು. ಕೊನೆಗೆ 13 ದಿನಗಳ ಬಳಿಕ ಜ.26 ರಂದು ರಾಜೀವ್ ಗೌಡ ಬಂಧನವಾಗಿತ್ತು.
























