ಪ್ರಧಾನಿ ಮೋದಿ, ಗಣ್ಯರಿಂದ ಸಂತಾಪದ ಮಹಾಪೂರ
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಪ್ರಭಾವಿ ರಾಜಕೀಯ ನಾಯಕ ಅಜಿತ್ ಪವಾರ್ ವಿಮಾನ ಅವಘಡದಲ್ಲಿ ಮೃತ್ಯುವಿಗೀಡಾಗಿರುವ ದುರ್ಘಟನೆ ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದೆ. ನಿನ್ನೆ ಮುಂಬೈಯಲ್ಲಿ ಸಚಿವ ಸಂಪುಟ ಸಭಯಲ್ಲಿ ಭಾಗವಹಿಸಿ ಇಂದು ಬೆಳಗ್ಗೆ 8 ಗಂಟೆಗೆ ಕಿರು ವಿಮಾನದಲ್ಲಿ ತನ್ನ ತವರು ಕ್ಷೇತ್ರವಾದ ಬಾರಾಮತಿಗೆ ಹೊರಟಿದ್ದ ಅಜಿತ್ ಪವಾರ್ 8.45ಕ್ಕೆಲ್ಲ ಇನ್ನಿಲ್ಲವಾಗಿದ್ದಾರೆ. ಬಾರಾಮತಿಯ ಜಿಲ್ಲಾ ಪರಿಸತ್ ಚುನಾವಣೆಯ ಪ್ರಚಾರಕ್ಕೆಂದು ಹೊರಟಿದ್ದ ಅವರ ಪಾಲಿಗೆ ಇದುವೇ ಕೊನೆಯ ಪ್ರಯಾಣವಾಗಿತ್ತು. ನಾಲ್ಕು ಸಭೆಗಳಲ್ಲಿ ಭಾಗವಹಿಸಿ ಇಂದೇ ಸಂಜೆ ಅವರು ವಾಪಸ್ ಮುಂಬೈಗೆ ಹೊರಡಬೇಕಾಗಿತ್ತು. ಆದರೆ ವಿಧಿಯ ಲೆಕ್ಕಾಚಾರ ಬೇರೆಯೇ ಇತ್ತು.
ವಿಮಾನ ರನ್‌ವೇ ಸಮೀಪಿಸಿ ರನ್‌ವೇ ಮೇಲೆಯೇ ಹಾರುತ್ತಿತ್ತು. ರನ್‌ವೇಯಲ್ಲಿ ಇಳಿಯಲು ಇನ್ನೇನು 100 ಅಡಿ ಇದ್ದಾಗ ಪತನಗೊಂಡು ಬಿದ್ದಿದೆ.
ನೆಲಕ್ಕಪ್ಪಳಿಸಿದ ರಭಸಕ್ಕೆ ಇಡೀ ವಿಮಾನ ಹೊತ್ತಿ ಉರಿದಿದ್ದು, ಅರದಲ್ಲಿದ್ದ ಇತರ ಐವರು ಕೂಡ ಮೃತಪಟ್ಟಿದ್ದಾರೆ. ವಿಮಾನ ಪತನಗೊಂಡ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿ, ವಿಮಾನ ನೆಲಕ್ಕೆ ಬಿದ್ದ ಕೂಡಲೇ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡಿತು. ನಂತರ 4-5 ಸಲ ಸ್ಫೋಟಗಳು ಸಂಭವಿಸಿದವು ಎಂದು ತಿಳಿಸಿದ್ದಾರೆ.

ವಿಮಾನ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಳ್ಳುವುದನ್ನು ನೋಡಿದ ಕೂಡಲೇ ಸ್ಥಳೀಯರು ಧಾವಿಸಿ ಪ್ರಯಾಣಿಕರನ್ನು ಹೊರಗೆ ತೆಗೆಯಲು ಪ್ರಯತ್ನಪಟ್ಟರು. ಆದರೆ ಬೆಂಕಿಯ ಜ್ವಾಲೆಯಿಂದ ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಅಜಿತ್ ಪವಾರ್ ಇಂದು ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ತಮ್ಮ ಸ್ವಕ್ಷೇತ್ರ ಬಾರಾಮತಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. 8.45ರ ವೇಳೆಗೆ ಅವರ ವಿಮಾನ ಬಾರಾಮತಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಲ್ಯಾಂಡ್ ಆಗುವ ಕೆಲ ಸೆಕೆಂಡ್ ಮೊದಲು ವಿಮಾನ ಪತನವಾಗಿದೆ. ಅಜಿತ್ ಪವಾರ್ ಅವರ ಪಿಎಸ್ಒ ಸೇರಿದಂತೆ ಇಬ್ಬರು ಸಿಬ್ಬಂದಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅಜಿತ್ ಪವಾರ್ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎನ್‌ಸಿಪಿ ಪಕ್ಷ ಸ್ಥಾಪಕ ಶರದ್ ಪವಾರ್ ಅವರ ತಮ್ಮನ ಮಗ. ಚಿಕ್ಕಪ್ಪನ ನೆರಳಿನಲ್ಲೇ ರಾಜಕೀಯ ಪ್ರಾರಂಭಿಸಿ ಮುಗಿಲೆತ್ತರ ಬೆಳೆದಿದ್ದರು. 2025ರ ವಿಧಾನಸಭಾ ಚುನಾವಣೆಯಲ್ಲಿ ಅವರು ಯುಗೇಂದ್ರ ಪವಾರ್ ಅವರನ್ನು ಸೋಲಿಸಿ ಗೆದ್ದಿದ್ದರು. ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದಲ್ಲಿ ಅತ್ಯಂತ ಶಕ್ತಿಶಾಲಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಅವರು ಹಲವು ಬಾರಿ ಉಪಮುಖ್ಯಮಂತ್ರಿ ಹುದ್ದೆಯ ದಾಖಲೆಯನ್ನು ಹೊಂದಿದ್ದರೂ, ಅವರು ಎಂದಿಗೂ ಮುಖ್ಯಮಂತ್ರಿ ಸ್ಥಾನಕ್ಕೇರಲೇ ಇಲ್ಲ.
ಇತ್ತೀಚಿನ ವರ್ಷಗಳಲ್ಲಿ ಪಕ್ಷದೊಳಗಿನ ಒಡಕಿನ ನಂತರ ತಮ್ಮದೇ ಆದ ಎನ್‌ಸಿಪಿ ಬಣವನ್ನು ಮುನ್ನಡೆಸುತ್ತಿದ್ದರು. ಈ ಅಪಘಾತವು ರಾಜಕೀಯ ವಲಯಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ, ಮಾತ್ರವಲ್ಲದೆ ಎನ್‌ಸಿಪಿ ಅಜಿತ್ ಪವಾರ್ ಬಣದ ಭವಿಷ್ಯದ ಮುಂದೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದನ್ನು ಇಟ್ಟಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಅಜಿತ್ ಪವಾರ್ ಸಖ್ಯ ಮಾಡಿಕೊಂಡಿದ್ದರೂ ಈ ಸಂಬಂಧ ಸದಾಕಾಲ ಮಧುರವಾಗಿ ಏನೂ ಇರಲಿಲ್ಲ.
ಅಜಿತ್ ಪವಾರ್ ತಮ್ಮ ರಾಜಕೀಯ ಚಾಣಾಕ್ಷತನದ ಮೂಲಕ ಮಹಾರಾಷ್ಟ್ರದಲ್ಲಿ ಎನ್‌ಸಿಪಿಯನ್ನು ಬಲಪಡಿಸಿದವರು. ಆದರೆ ಅವರು ತನ್ನ ಚಿಕ್ಕಪ್ಪನನ್ನು ಬಿಟ್ಟು, ಎನ್‌ಸಿಪಿಯನ್ನು ತೊರೆದು ಎನ್‌ಡಿಎ ಒಕ್ಕೂಟಕ್ಕೆ ಸೇರಿದ್ದರು. ಅವರು ಎಂಟು ಎನ್‌ಸಿಪಿ ಶಾಸಕರೊಂದಿಗೆ ಬಿಜೆಪಿ-ಶಿಂಧೆ ಬಣವನ್ನು ಸೇರಿದರು. ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆದರು.
ವರ್ಷಗಳ ಕಠಿಣ ಪರಿಶ್ರಮದ ನಂತರ, ಅವರು ಮಹಾರಾಷ್ಟ್ರ ರಾಜಕೀಯದಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿದರು. 1995ರಲ್ಲಿ ಅವರು ಮೊದಲು ಪುಣೆ ಜಿಲ್ಲೆಯ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾದರು. ಅಂದಿನಿಂದ ಅವರು ನಿರಂತರವಾಗಿ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1995, 1999, 2004, 2009, 2014 ಮತ್ತು 2019ರಲ್ಲಿ ಅವರು ಶಾಸಕ ಚುನಾವಣೆಯಲ್ಲಿ ಗೆದ್ದರು.

ಸಚಿವರಾಗಿ ದೀರ್ಘ ಅನುಭವ ಹೊಂದಿದ್ದರು, ಅಜಿತ್ ಮಹಾರಾಷ್ಟ್ರ ಸರ್ಕಾರದಲ್ಲಿ ಹಲವಾರು ಪ್ರಮುಖ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದರು. ಅವರು ರಾಜ್ಯ ಸರ್ಕಾರದಲ್ಲಿ ಕೃಷಿ, ಇಂಧನ ಮತ್ತು ಯೋಜನಾ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸುಧಾಕರ್ ನಾಯಕ್ ಅವರ ಸರ್ಕಾರದಲ್ಲಿ ಕೃಷಿ ಮತ್ತು ವಿದ್ಯುತ್ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರ ಚಿಕ್ಕಪ್ಪ ಶರದ್ ಪವಾರ್ 1992 ಮತ್ತು 1993ರಲ್ಲಿ ಮುಖ್ಯಮಂತ್ರಿಯಾದಾಗ ಅವರನ್ನು ಸಚಿವರನ್ನಾಗಿ ನೇಮಿಸಲಾಗಿತ್ತು.
ನಂತರ, 1999 ರಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಅಧಿಕಾರಕ್ಕೆ ಬಂದಾಗ, ಅವರನ್ನು ವಿಲಾಸ್‌ರಾವ್ ದೇಶಮುಖ್ ಅವರ ಸರ್ಕಾರದಲ್ಲಿ ನೀರಾವರಿ ಸಚಿವರನ್ನಾಗಿ ನೇಮಿಸಲಾಯಿತು. 2003-2004ರಲ್ಲಿ, ಅವರಿಗೆ ಸುಶೀಲ್ ಕುಮಾರ್ ಶಿಂಧೆ ಅವರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು.
2019ರಲ್ಲಿ ವಿದರ್ಭ ನೀರಾವರಿ ಹಗರಣದ ಪ್ರಮುಖ ಆರೋಪಿಯಾಗಿದ್ದ ಅಜಿತ್ ಪವಾರ್ಗೆ ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಕ್ಲೀನ್ ಚಿಟ್ ಕೊಟ್ಟಿತ್ತು.ಪ್ರಕರಣದ ಕುರಿತಂತೆ ಬಾಂಬೆ ಹೈಕೋರ್ಟ್ನಲ್ಲಿರುವ ನಾಗಪುರ ನ್ಯಾಯಪೀಠಕ್ಕೆ ಮಹಾರಾಷ್ಟ್ರ ಎಸಿಬಿ ಅಫಿಡವಿಟ್ ಸಲ್ಲಿಸಿದ್ದು, ವಿದರ್ಭ ಪ್ರದೇಶದಲ್ಲಿ ನಡೆದಿರುವ ನೀರಾವರಿ ಹಗರಣಗಳಲ್ಲಿ ಅಜಿತ್ ಪವಾರ್ ಪಾತ್ರವಿಲ್ಲ ಎಂದು ಅಫಿಡವಿಟ್ನಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಮೋದಿ ಸಂತಾಪ
ಅಜಿತ್ ಪವಾರ್ ಅವರ ಅನಿರೀಕ್ಷಿತ ನಿಧನಕ್ಕೆ ದೇಶದಾದ್ಯಂತ ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ. ಪಕ್ಷಾತೀತವಾಗಿ ನಾಯಕರು ಕಂಬನಿ ಮಿಡಿದಿದ್ದಾರೆ. ಜನರ ನಾಯಕನಾಗಿದ್ದ ಅಜಿತ್ ಪವಾರ್ ತಳಮಟ್ಟದ ರಾಜಕೀಯದಿಂದ ಮೇಲೆ ಬಂದವರು. ಜನಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಅವರು ಜನರ ವ್ಯಾಪಕ ಗೌರವಕ್ಕೆ ಪಾತ್ರರಾಗಿದ್ದರು. ಅವರ ಆಡಳಿತದ ಅನುಭವ ಮತ್ತು ತಳಮಟ್ಟದ ಜನರನ್ನು ಮೇಲೆತ್ತುವ ಆಸಕ್ತಿ ಅನನ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರವು ಇಂದು ಒಬ್ಬ ದಕ್ಷ ಆಡಳಿತಗಾರನನ್ನು ಕಳೆದುಕೊಂಡಿದೆ. ನಮ್ಮ ಸರ್ಕಾರದ ಪ್ರಬಲ ಶಕ್ತಿಯಾಗಿದ್ದ ‘ದಾದಾ’ (ಅಜಿತ್ ಪವಾರ್) ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ದೊಡ್ಡ ಆಘಾತ ತಂದಿದೆ ಎಂದು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಅಜಿತ್ ಪವಾರ್ ಅವರ ಕೆಲಸದ ವೈಖರಿ ಮತ್ತು ನಿರ್ಧಾರ ತೆಗೆದುಕೊಳ್ಳುವ ವೇಗ ಎಲ್ಲರಿಗೂ ಮಾದರಿಯಾಗಿತ್ತು. ನಾವು ಒಬ್ಬ ಉತ್ತಮ ಸ್ನೇಹಿತ ಮತ್ತು ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ರಾಜಕೀಯ ನಾಯಕರು ತೀವ್ರ ದಿಗ್ಭ್ರಮೆ ಮತ್ತು ಶೋಕ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಈ ಕುರಿತು ತಮ್ಮ ಸಂತಾಪದ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಅಕಾಲಿಕ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅವರ ನಿಧನವು ಮಹಾರಾಷ್ಟ್ರದ ರಾಜಕೀಯ ಮತ್ತು ಸಾರ್ವಜನಿಕ ಜೀವನಕ್ಕೆ ದೊಡ್ಡ ನಷ್ಟ. ಅವರು ಅಪಾರ ಅನುಭವ ಮತ್ತು ದೃಢ ಸಂಕಲ್ಪ ಹೊಂದಿದ್ದ ನಾಯಕರಾಗಿದ್ದರು. ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಅಜಿತ್ ಪವಾರ್ ಅವರ ಸಾವಿನ ಸುದ್ದಿ ಅತ್ಯಂತ ಆಘಾತಕಾರಿ ಮತ್ತು ಬೇಸರ ತಂದಿದೆ. ಅವರು ದೇಶದ ರಾಜಕೀಯದಲ್ಲಿ ಅತ್ಯಂತ ಕ್ರಿಯಾಶೀಲ ನಾಯಕರಾಗಿದ್ದರು ಎಂದು ಹೇಳಿದ್ದಾರೆ.
ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಜಿತ್ ಪವಾರ್ ಅವರು ಅಕಾಲಿಕ ಮರಣ ಹೊಂದಿದರು ಎಂಬ ವಾರ್ತೆ ತಿಳಿದು ತೀವ್ರ ಆಘಾತ ಉಂಟಾಯಿತು. ಮಹಾರಾಷ್ಟ್ರದ ಪ್ರಭಾವೀ ನಾಯಕರಾಗಿದ್ದ ಅವರು, ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅಜಿತ್ ಪವಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ನೆರೆಯ ರಾಜ್ಯದ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿರುವುದು ಇಡೀ ದೇಶಕ್ಕೆ ನಷ್ಟ ಎಂದು ಹೇಳಿದ್ದಾರೆ.
























