ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವ ಸಂದೇಶ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಜನತೆಗೆ 77ನೇ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಭವ್ಯ ಗಣರಾಜ್ಯೋತ್ಸವ ಪರೇಡ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧ್ಯಕ್ಷತೆ ವಹಿಸಿದ್ದಾರೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಹೃತ್ಪೂರ್ವಕವಾಗಿ ಶುಭಾಶಯ ಕೋರಿದ್ದಾರೆ. ಭಾರತದ ಗೌರವ, ಹೆಮ್ಮೆ ಮತ್ತು ವೈಭವದ ಸಂಕೇತವಾದ ಗಣರಾಜ್ಯೋತ್ಸವ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಹಾಗೂ ಉತ್ಸಾಹವನ್ನು ತುಂಬಲಿ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿರುವ ಪ್ರಧಾನಿ, ನಮ್ಮ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸೋಣ ಎಂದು ಸಂದೇಶ ನೀಡಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿ, ಎಲ್ಲರ ಜೀವನವು ಸಂತೋಷ, ಶಾಂತಿ, ಭದ್ರತೆ ಮತ್ತು ಸಾಮರಸ್ಯದಿಂದ ತುಂಬಿರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರವನ್ನುದ್ದೇಶಿಸಿ ಪ್ರೇರಣಾದಾಯಕ ಭಾಷಣ ಮಾಡಿದ್ದರು. ಸಂವಿಧಾನದ ಅನನ್ಯತೆ, ಸಾಮೂಹಿಕ ಮನೋಭಾವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬ ನಾಗರಿಕರು ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತು ಭಾರತವನ್ನು ಅಭಿವೃದ್ಧಿಗೊಳಿಸಬೇಕೆಂದು ಹೇಳಿದ್ದರು.
























