ಗಣರಾಜ್ಯೋತ್ಸವ : ಕೇಂದ್ರ ಸರ್ಕಾರದ ಟೀಕೆಯಿಲ್ಲದ ಭಾಷಣವನ್ನು ಓದಿದ ರಾಜ್ಯಪಾಲರು

ಅಧಿವೇಶನ ವಿವಾದದ ಹಿನ್ನೆಲೆಯಲ್ಲಿ ಎಚ್ಚರಿಕೆಯ ನಡೆ ಅನುಸರಿಸಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯಪಾಲರ ಗಣರಾಜ್ಯೋತ್ಸವ ಭಾಷಣ ಯಾವುದೇ ವಿವಾದವಿಲ್ಲದೆ ಪೂರ್ಣಗೊಂಡಿದೆ.ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನೇ ಓದಿದರೂ ಅದರಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವುದೇ ವಾಕ್ಯಗಳು ಇರಲಿಲ್ಲ.

ರಾಜ್ಯಪಾಲರ ಆಕ್ಷೇಪದ ಬೆನ್ನಲ್ಲೇ ರಾಜ್ಯ ಸರ್ಕಾರ ಗಣರಾಜ್ಯೋತ್ಸವ ಭಾಷಣದ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗಿದೆ. ರಾಜ್ಯಪಾಲರಿಗೆ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಯಾವುದೇ ಅಂಶಗಳನ್ನು ಈ ಬಾರಿ ಸೇರಿಸಲಾಗಿಲ್ಲ. ಪರಿಣಾಮವಾಗಿ, ಯಾವುದೇ ವಿವಾದವಿಲ್ಲದೆ ರಾಜ್ಯಪಾಲರು ನಿರಾತಂಕವಾಗಿ ಸಂಪೂರ್ಣ ಭಾಷಣವನ್ನು ಓದಿದರು. ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಗಣರಾಜ್ಯೋತ್ಸವ ಸಮಾರಂಭದ ವೇದಿಕೆಯಾಗುತ್ತಾ ಎಂಬ ಅನುಮಾನಗಳು ಹುಸಿಯಾದವು.





















































 
 

ಇತ್ತೀಚೆಗೆ ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳಿದ್ದ ಭಾಷಣದ ಅಂಶಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ಸೂಚಿಸಿದ್ದರು. ಆದರೆ ಆ ವೇಳೆ ಸರ್ಕಾರ ಪಟ್ಟು ಬಿಡದ ಕಾರಣ ರಾಜ್ಯಪಾಲರು ಭಾಷಣದ ಮೊದಲ ಮತ್ತು ಕೊನೆಯ ಸಾಲುಗಳನ್ನು ಮಾತ್ರ ಓದಿ ಸಭಾಂಗಣ ತೊರೆದಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವ ಭಾಷಣದಲ್ಲಿ ಕೇಂದ್ರದ ವಿರುದ್ಧ ಟೀಕೆಗಳಿದ್ದರೆ ತಾವು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ಓದುವುದಿಲ್ಲ ಎಂದು ರಾಜ್ಯಪಾಲರು ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆ ಗಮನದಲ್ಲಿಟ್ಟುಕೊಂಡು, ಈ ಬಾರಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ರಾಜ್ಯದ ಸಾಧನೆಗಳು, ಸಂವಿಧಾನ ಮೌಲ್ಯಗಳು, ಜನಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನಷ್ಟೇ ಭಾಷಣದಲ್ಲಿ ಸೇರಿಸಿದೆ.

ಈ ದಿನ ಹೊಸ ಭಾರತದ ಸಂವಿಧಾನ ಜಾರಿಗೆ ಬಂದ ಐತಿಹಾಸಿಕ ದಿನ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಾನತೆ ಘೋಷಣೆಯ ಮಹತ್ವ
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಕೊಡುಗೆಗಳಿಗೆ ಗೌರವ, ರಾಜ್ಯ ಸರ್ಕಾರ ವಿವಿಧ ನೇಮಕಾತಿಗಳಲ್ಲಿ ಹಿಂದುಳಿದ ಮತ್ತು ಅಲಕ್ಷಿತ ಸಮುದಾಯಗಳಿಗೆ ಪ್ರಾಧಾನ್ಯತೆ ನೀಡಿದೆ, ಜನಕಲ್ಯಾಣ ಯೋಜನೆಗಳಿಗೆ ವರ್ಷಕ್ಕೆ 1.12 ಲಕ್ಷ ಕೋಟಿ ರೂ. ಮತ್ತು ಗ್ಯಾರಂಟಿ ಯೋಜನೆಗಳಿಗೆ 1.13 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ, ಮಹಿಳೆಯರ ಸುರಕ್ಷತೆಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬಿತ್ಯಾದಿ ಸಕಾರಾತ್ಮಕ ಅಂಶಗಳಷ್ಟೇ ರಾಜ್ಯಪಾಲರ ಭಾಷಣದಲ್ಲಿದ್ದವು.

error: Content is protected !!
Scroll to Top