ರಾಮಕುಂಜ : ತಂದೆಗೆ ಇರಿದು ಮಗ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

ತಂದೆಯೇ ಗುಂಡು ಹಾರಿಸಿ ಮಗನನ್ನು ಸಾಯಿಸಿದ್ದಾರೆ ಎಂದು ದೂರು

ಕಡಬ : ಇಲ್ಲಿನ ರಾಮಕುಂಜದಲ್ಲಿ ಶನಿವಾರ ಸಂಜೆ ಬಾಲಕನೋರ್ವ ತಂದೆಗೆ ಇರಿದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ತಂದೆಯೇ ಮಗನಿಗೆ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ.

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜದ ಪಾದೆ ಎಂಬಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿತ್ತು. ಮೋಕ್ಷ (17) ಗುಂಡೇಟು ತಗುಲಿ ಸಾವನ್ನಪ್ಪಿದ ಬಾಲಕ. ರಾಮಕುಂಜ ಗ್ರಾಮದ ಪಾದೆ ನಿವಾಸಿ ತಂದೆ ವಸಂತ ಅಮೀನ್‌ (60) ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.





















































 
 

ಘಟನೆಗೆ ಸಂಬಂಧಿಸಿದಂತೆ ವಸಂತ ಅಮೀನ್‌ ವಿರುದ್ಧ ಆತನ ಪತ್ನಿ ಜಯಶ್ರೀ ದೂರು ದಾಖಲಿಸಿದ್ದಾರೆ. ಮಗನಿಗೆ ಶೂಟ್ ಮಾಡಿ ಆರೋಪಿ ವಸಂತ ಅಮೀನ್‌ ಚಾಕುವಿನಿಂದ ತನ್ನನ್ನು ಇರಿದುಕೊಂಡಿದ್ದಾನೆ. ಗಾಯಗೊಂಡ ಆರೋಪಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಮನೆಯಲ್ಲಿ ತಂದೆ ಮತ್ತು ಮಗ ಮಾತ್ರ ವಾಸಿಸುತ್ತಿದ್ದರು. ಪತ್ನಿ ಜಯಶ್ರೀ ಪತಿಯೊಂದಿಗೆ ಮನಸ್ತಾಪಗೊಂಡು ಮಂಗಳೂರಿನ ತನ್ನ ತಾಯಿ ಮನೆಯಲ್ಲಿದ್ದರು. ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರಂಭದಲ್ಲಿ ಇದು ತಂದೆ ಮತ್ತು ಅಪ್ರಾಪ್ತ ವಯಸ್ಸಿನ ಮಗನ ನಡುವಿನ ಜಗಳ ನಡೆದು ಮಗ ತಂದೆಗೆ ಇರಿದು ಬಳೀಕ ಪಶ್ಚಾತ್ತಾಪದಿಂದ ತಾನು ಕೋವಿಯಿಂದ ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡ ಪ್ರಕರಣ ಎಂದು ವರದಿಯಾಗಿತ್ತು.

ಮೂಲತಃ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಳು ನಿವಾಸಿಯಾಗಿರುವ ವಸಂತ್‌ಗೆ ಪೆರ್ಲದ ಜಯಶ್ರೀ ಎಂಬವರೊಂದಿಗೆ ವಿವಾಹವಾಗಿತ್ತು. ಇವರಿಗೆ ಮೋಕ್ಷ ಏಕೈಕ ಪುತ್ರನಾಗಿದ್ದ. ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಜಾಗ ಖರೀದಿಸಿದ್ದ ವಸಂತ್ ಇಲ್ಲೇ ವಾಸವಿದ್ದರು. ಕೆಲ ದಿನಗಳಿಂದ ಪತಿ ಮತ್ತು ಪತ್ನಿಯ ನಡುವೆ ಆಸ್ತಿ ವಿಚಾರವಾಗಿ ಜಗಳವಾಗಿದ್ದು, ಒಂದು ತಿಂಗಳ ಹಿಂದೆ ಪತ್ನಿ ತವರು ಮನೆಗೆ ತೆರಳಿದ್ದರು ಎನ್ನಲಾಗಿದೆ.

ತಂದೆ ಮತ್ತು ಮಗ ಪಾದೆಯ ಮನೆಯಲ್ಲಿ ವಾಸವಿದ್ದು, ಶನಿವಾರ ಸಂಜೆ ಇವರೊಳಗೆ ಅದ್ಯಾವುದೋ ವಿಷಯಕ್ಕೆ ಜಗಳ ಉಂಟಾಗಿದೆ. ಈ ವೇಳೆ ತಂದೆ ವಸಂತ ಅಮೀನ್‌ರಿಗೆ ಚೂರಿ ಇರಿತದ ಗಂಭೀರ ಗಾಯಗಳಾಗಿವೆ. ಮಗ ಮೋಕ್ಷ ಮುಖಕ್ಕೆ ಗುಂಡೇಟು ತಗುಲಿ ಮೃತಪಟ್ಟಿದ್ದಾರೆ. ಈ ಮಧ್ಯೆ ತಂದೆಯೇ ಮಗನಿಗೆ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಆರೋಪಿಸಿ ವಸಂತ್ ಅಮೀನ್‌ರ ಪತ್ನಿ ಜಯಶ್ರೀ ಪೊಲೀಸ್ ದೂರು ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಸಂತ ಅಮೀನ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕಾಗಿ ಜಗಳ ನಡೆದಿದೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

error: Content is protected !!
Scroll to Top