ಅಂಡರ್ ಗ್ರೌಂಡ್ನಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ
ಮಂಗಳೂರು : ನಗರದ ಅಕ್ಬರ್ ಕಾಂಪ್ಲೆಕ್ಸ್ನಲ್ಲಿ ಶನಿವಾರ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದಲ್ಲಿದ್ದ ಹಲವು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯ ಜ್ವಾಲೆಯು ಕಟ್ಟಡದ ಹಲವು ಮಳಿಗೆಗಳಿಗೆ ವ್ಯಾಪಿಸಿದ್ದು, ಇದರಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ವರದಿಯಾಗಿದೆ.
ಅಂಡರ್ ಗ್ರೌಂಡ್ನಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಟ್ಟೆ ಅಂಗಡಿಗೂ ಬೆಂಕಿಯಿಂದ ಹಾನಿ ಉಂಟಾಗಿದೆ. ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಂಗಡಿಗಳಲ್ಲಿರುವ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ. ಬೆಂಕಿಯಿಂದಾಗಿ ಪರಿಸರದಲ್ಲಿ ದಟ್ಟವಾದ ಹೊಗೆ ಆವರಿಸಿ ಪಕ್ಕದ ಲಾಡ್ಜ್ನಲ್ಲಿದ್ದವರು ಇಂದರಿಂದ ತೊಂದರೆ ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಕಿಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಿಂದ ಸಂಭವಿಸಿದ ಒಟ್ಟು ನಷ್ಟದ ಪ್ರಮಾಣ ಹಾಗೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
























