ಮೂರನೇ ತಲೆಮಾರಿಗೂ ಮುಂದುವರಿದ ಎಂಡೋಸಲ್ಫಾನ್‌ ದುಷ್ಪರಿಣಾಮ

ಹೊಸದಾಗಿ 543 ಜನರಲ್ಲಿ ಎಂಡೋಸಲ್ಫಾನ್‌ ಅಂಶ ಪತ್ತೆ

ಬೆಂಗಳೂರು: ಕರಾವಳಿ ಭಾಗದಲ್ಲಿ ಕಳೆದ ಹಲವು ದಶಕಗಳಿಂದ ಜನರ ಜೀವ ಹಿಂಡುತ್ತಿರುವ ಎಂಡೋಸಲ್ಫಾನ್ ಕ್ರಿಮಿನಾಶಕದ ಪರಿಣಾಮ ಮೂರನೇ ತಲೆಮಾರಿನ ತನಕ ಮುಂದುವರಿದುಕೊಂಡು ಬಂದಿರುವ ಆಘಾತಕಾರಿ ಅಂಶ ಪತ್ತೆಯಾಗಿದೆ. ಎಂಡೋಸಲ್ಫಾನ್‌ ಸಿಂಪಡಣೆಯಿಂದ ಜನರ ವಂಶವಾಹಿಯ ಮೇಲೆ ಪರಿಣಾಮವಾಗಿದ್ದು, ಹುಟ್ಟುವ ಮಕ್ಕಳು ಕೂಡ ಅಂಗವೈಕಲ್ಯಕ್ಕೊಳಗಾಗಿದ್ದರು. ಜನರ ಜೀವವನ್ನೇ ಹಿಂಡುತಿದ್ದ ರೋಗ ಈಗ 3ನೇ ತಲೆಮಾರಿಗೂ ಹಬ್ಬಿದೆ. ಹೊಸದಾಗಿ 543 ಜನರಿಗೆ ಎಂಡೋಸಲ್ಫಾನ್ ಅಂಶ ಇರುವುದು ಪತ್ತೆಯಾಗಿದೆ.

ಒಂದೆಡೆ ಅಂಗವೈಕಲ್ಯದಿಂದ ನೋವು ಅನುಭವಿಸುತ್ತಿರುವ ಮಕ್ಕಳು, ಮತ್ತೊಂದೆಡೆ ಬುದ್ಧಿ‌ಮಾಂದ್ಯತೆ, ಬಹು ಅಂಗಾಂಗ ವೈಫಲ್ಯ ಹೊಂದಿದ ವಯಸ್ಕರು… ಹುಟ್ಟಿದಾಗಿನಿಂದ ಮನುಷ್ಯನ ಜೀವವನ್ನು ಹಿಂಡಿ, ನೋವು ಕೊಟ್ಟು ಕೊನೆಗೆ ಜೀವ ತೆಗೆಯುವ ಎಂಡೋಸಲ್ಫಾನ್ ಕರಾವಳಿಯಲ್ಲಿ ತನ್ನ ಅಸ್ತಿತ್ವವನ್ನ ಮತ್ತೊಮ್ಮೆ ತೋರಿಸಿದೆ. ಹೊಸ ಸರ್ವೆಯಲ್ಲಿ ಚಿಕ್ಕ ಮಕ್ಕಳು ಸೇರಿ ಒಟ್ಟು 543 ಜನರು ಎಂಡೋ ಪೀಡಿತರು ಪತ್ತೆಯಾಗಿದ್ದು, ಆತಂಕ ತಂದೊಡ್ಡಿದೆ.





















































 
 

1986ರಿಂದ 2011ರ ಅವಧಿಯಲ್ಲಿ ಗೇರು ಬೀಜದ ಇಳುವರಿಗೆ ಅಡ್ಡಿಯಾಗುತಿದ್ದ ಟೀ ಸೊಳ್ಳೆಗಳನ್ನು ನಾಶಪಡಿಸಲು ಉತ್ತರ ಕನ್ನಡ, ದಕ್ಷಿಣ ಕನ್ನಡ,, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಎಂಡೋಸಲ್ಫಾನ್‌ ಎಂಬ ಕ್ರಿಮಿನಾಶಕವನ್ನು ಸಿಂಪಡಣೆ ಮಾಡಲಾಗುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕಿನ ಸುಮಾರು 11,794.23 ಹೆಕ್ಟೇರ್ ಗೇರು ಬೆಳೆದ ಭೂಮಿಗೆ ಎಂಡೋಸಲ್ಪಾನ್ ವಿಷ ದ್ರಾವಣವನ್ನು ಸಿಂಪಡಿಸಲಾಗಿತ್ತು. ಸಿಂಪಡಣೆಯಿಂದಾಗಿ ಗರ್ಭಿಣಿಯರು, ಮಕ್ಕಳಿಗೆ ಇದರ ಅಡ್ಡ ಪರಿಣಾಮವಾಗಿ ಹುಟ್ಟಿದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಅಂಗವೈಕಲ್ಯ, ನರದೌರ್ಬಲ್ಯಕ್ಕೆ ಈಡಾದರೆ, ಇದರ ಗಾಳಿ ಸೇವಿಸಿದ ಪುರುಷರಲ್ಲೂ ಉಸಿರಾಟ ಸಮಸ್ಯೆ, ಪಾರ್ಶ್ವವಾಯು, ನರದೌರ್ಬಲ್ಯ ಕಾಣಿಸಿಕೊಂಡಿತ್ತು. ಹೀಗೆ 8000ಕ್ಕೂ ಹೆಚ್ಚು ಜನ ಇದರ ಅಡ್ಡ ಪರಿಣಾಮಕ್ಕೆ ಒಳಗಾಗಿದ್ದರು.

ನಿರಂತರ ಹೋರಾಟದಿಂದ ಎಂಡೋ ಬಾಧಿತರಿಗೆ ಉಚಿತ ಚಿಕಿತ್ಸೆ, ಸಲತ್ತುಗಳನ್ನು ನೀಡಲಾಗಿತ್ತು. ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ 3,607 ಜನ ಉಡುಪಿ ಜಿಲ್ಲೆಯಲ್ಲಿ 1,514 ಜನ, ಉತ್ತರ ಕನ್ನಡ ಜಿಲ್ಲೆಯಲ್ಲಿ 1,793 ಜನ, ಸೇರಿದಂತೆ ಒಟ್ಟು 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 2023-24 ರಲ್ಲಿ ಒಟ್ಟು 1554 ಜನರನ್ನು ಗುರುತಿಸಲಾಗಿತ್ತು. ಇದೀಗ ಹೊಸ ಸರ್ವೆಯಲ್ಲಿ ಚಿಕ್ಕ ಮಕ್ಕಳು ಸೇರಿ ಒಟ್ಟು 543 ಜನರು ಎಂಡೋ ಪೀಡಿತರ ಪತ್ತೆಯಾಗಿದ್ದಾರೆ.

ಸಂಶೋಧಕರ ಪ್ರಕಾರ ಈ ರೋಗ ವಂಶವಾಹಿ ಮೂಲಕ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ. ಎಂಡೋ ಬಾಧಿತರ ಸಂಖ್ಯೆ ಈ ಹಿಂದೆ ಕಡಿಮೆಯಾಗಿತ್ತು ಎಂದು ಸರ್ಕಾರ ಇವರಿಗೆ ನೀಡುವ ಸೌಲಭ್ಯವನ್ನು ನಿಲ್ಲಿಸಿತ್ತು. ಇದೀಗ ಸರ್ವೆ ನಡೆದು ಮತ್ತೆ ಎಂಡೋ ಪೀಡಿತರು ಹೆಚ್ಚಾಗಿರುವುದು ಆತಂಕ ತಂದಿದೆ. ಇದರ ಬೆನ್ನಲ್ಲೇ ಎನ್‌ಜಿಒಗಳು ಉಚಿತ ಚಿಕಿತ್ಸೆ ನೀಡುವ ಕಾರ್ಯಕ್ಕೆ ಮುಂದಾಗಿವೆ. ಈ ಎಂಡೋ ಪೀಡಿತರಿಗೆ ಸರ್ಕಾರದಿಂದ ಸಮರ್ಪಕ ಔಷಧ, ಚಿಕಿತ್ಸೆಗಳು ನೀಡಬೇಕಿದೆ.

error: Content is protected !!
Scroll to Top