1997ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಕೊಲೆ, ದರೋಡೆ ಕೃತ್ಯದ ಆರೋಪಿ
ಮಂಗಳೂರು : ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಓರ್ವ ಸದಸ್ಯನನ್ನು ಮಂಗಳೂರು ಪೊಲೀಸರು ಬರೋಬ್ಬರಿ 29 ವರ್ಷಗಳ ಬಳಿಕ ಬಂಧಿಸಿದ್ದಾರೆ. ಮಂಗಳೂರಿನ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪನನ್ನು ಆಂಧ್ರ ಪ್ರದೇಶದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಈವರೆಗೆ ರಾಜ್ಯದಲ್ಲಿ ಸುಮಾರು 13 ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ.
1997 ಅಕ್ಟೋಬರ್ 11ರಂದು ಉರ್ವ ಮಾರಿಗುಡಿ ಕ್ರಾಸ್ ಬಳಿಯ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗ್, ಮನೆಯಲ್ಲಿದ್ದ ಲೂವಿಸ್ ಡಿಮೆಲ್ಲೋ(80) ಮತ್ತು ರಂಜಿತ್ ವೇಗಸ್(19) ಎಂಬವರನ್ನು ಕೊಲೆ ಮಾಡಿ ಚಿನ್ನಾಭರಣಗಳ್ನು ದೊಚಿಕೊಂಡು ಪರಾರಿಯಾಗಿತ್ತು. ಚಿಕ್ಕ ಹನುಮಂತಪ್ಪ ಸೇರಿದಂತೆ ಎಂಟು ಸದಸ್ಯರ ತಂಡ ಈ ಕೃತ್ಯ ಎಸಗಿತ್ತು.
ಪ್ರಕರಣದ ವಿಚಾರಣೆ ಮುಕ್ತಾಯಗೊಂಡು ಆಪಾದಿತರು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಆರೋಪಿ ಚಿಕ್ಕ ಹನುಮ ಹೆಸರು ಬದಲಿಸಿಕೊಂಡು ನಾಪತ್ತೆಯಾಗಿದ್ದ. ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ ತನ್ನ ಹೆಸರನ್ನು ಕೆ.ಕೃಷ್ಣಪ್ಪ ಅಲಿಯಾಸ್ ಕೃಷ್ಣ ಎಂದು ಹೆಸರು ಬದಲಿಸಿಕೊಂಡಿ ಆಂಧ್ರ ಪ್ರದೇಶದಲ್ಲಿ ವಾಸವಾಗಿದ್ದ.
ಚಿಕ್ಕ ಹನುಮನ ವಿರುದ್ದ 2010ರಲ್ಲಿ ಮಂಗಳೂರಿನ JMFC 2ನೇ ನ್ಯಾಯಾಲಯ ಎಲ್ಪಿಸಿ ವಾರಂಟ್ ಹೊರಡಿಸಿತ್ತು. 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆಂಧ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಎಂಬಲ್ಲಿ ಬಂಧಿಸಲಾಗಿದೆ. ಆರೋಪಿಯ ಪತ್ತೆ ಕಾರ್ಯ ನಡೆಸಿದ ಉರ್ವ ಪೊಲೀಸ್ ತಂಡಕ್ಕೆ ಪೊಲೀಸ್ ಕಮೀಷನರ್ ಪ್ರಶಂಸೆ ವ್ಯಕ್ತಪಡಿಸಿದ್ದು, ಹೆಚ್ಚಿನ ಬಹುಮಾನಕ್ಕಾಗಿ ರಾಜ್ಯದ ಡಿಜಿ ಮತ್ತು ಐಜಿಪಿಗೆ ಶಿಫಾರಸ್ಸು ಮಾಡಿದ್ದಾರೆ.
























