ದಾವೋಸ್: ಜಾಗತಿಕ ವೇದಿಕೆಯಲ್ಲಿ ಭಾರತದ ಆರ್ಥಿಕತೆಯನ್ನು ಕರ್ನಾಟಕದ ಡಿಸಿಎಂ ಡಿ. ಕೆ. ಶಿವಕುಮಾರ್ ಹೊಗಳಿದ್ದು, ಜಗತ್ತು ಭಾರತವನ್ನು ಹೆಚ್ಚಿನ ವಿಶ್ವಾಸದಿಂದ ನೋಡುತ್ತಿದೆ ಎಂದು ಹೇಳಿದ್ದಾರೆ.
ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಮಾತನಾಡಿದ ಅವರು, ಭಾರತದ ಸಾಧನೆಯ ಮೇಲೆ, ಮುಂದೆ ಸಾಗುತ್ತಿರುವ ಭಾರತದ ನಿರಂತರ ವೇಗದ ಮೇಲೆ ಪ್ರಪಂಚದ ವಿಶ್ವಾಸ ಅಧಿಕವಾಗುತ್ತಿದೆ ಎಂದಿದ್ದಾರೆ.
ಇನ್ನು ಡಿ ಕೆ ಶಿವಕುಮಾರ್ ಅವರು ವಿಶ್ವವೇದಿಕೆಯಲ್ಲಿ ನಿಂತು ಭಾರತದ ಆರ್ಥಿಕತೆಯನ್ನು ಹೊಗಳಿದ್ದು ಬಿಜೆಪಿಗೆ ಅಸ್ತ್ರವಾಗಿದ್ದರೆ, ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಬಗ್ಗೆ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತದ ಬೆಳವಣಿಗೆ ಎಷ್ಟೊಂದು ವೇಗವಾಗಿದೆ ಎನ್ನುವುದನ್ನು ವಿರೋಧ ಪಕ್ಷ ಸಹ ಒಪ್ಪಿಕೊಳ್ಳಲು ಆರಂಭಿಸಿದೆ. ಒಂದು ಕಡೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಭಾರತದ ಆರ್ಥಿಕತೆ ಸತ್ತಿದೆ’ ಎಂದು ಮೂದಲಿಸುತ್ತಿರುವಾಗ, ಮತ್ತೊಂದೆಡೆ ಡಿ. ಕೆ. ಶಿವಕುಮಾರ್ ಅವರು ವಿಶ್ವ ಆರ್ಥಿಕ ವೇದಿಕೆಯಲ್ಲೇ ರಾಹುಲ್ ಗಾಂಧಿ ಮಾತನ್ನು ಖಂಡಿಸಿರುವುದನ್ನು ನೋಡುವುದಕ್ಕೆ ಸಂತೋಷ ವಾಗುತ್ತದೆ. ಭಾರತದ ಆರ್ಥಿಕತೆಯಲ್ಲಿ ಸತ್ತಿರುವುದು, ಬದಲಾಗಿ ನಿಮ್ಮ ಹೈಕಮಾಂಡ್‌ನ ವಾಸ್ತವದ ಜ್ಞಾನ ಸತ್ತಿದೆ ಎನ್ನುವುದನ್ನು ದೃಢಪಡಿಸಿರುವುದಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು ಎಂದು ಹೇಳಿದೆ.
























