ಲಕ್ನೋ: ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬ ತನ್ನ ಲಿವ್ ಇನ್ ಪಾರ್ಟ್ನರ್ ಅನ್ನು ಹತ್ಯೆ ಮಾಡಿ, ಆಕೆಯ ಶವವನ್ನು ಸುಟ್ಟು, ಸಾಕ್ಷ್ಯ ನಾಶದ ಉದ್ದೇಶದಿಂದ ಚಿತಾ ಭಸ್ಮವನ್ನು ನದಿಗೆಸೆದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಆರೋಪಿ ರಾಮ್ ಸಿಂಗ್ ಸದ್ಯ ಪೊಲೀಸರ ವಶದಲ್ಲಿದ್ದಾನೆ.
ಈಗಾಗಲೇ ಇಬ್ಬರು ಪತ್ನಿಯರನ್ನು ಹೊಂದಿರುವ ಈ ಭೂಪ, ಮತ್ತೊಬ್ಬಳ ಜೊತೆಗೆ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದ. ಆಕೆಯ ಜೊತೆಗೆ ಹಣದ ವಿಚಾರವಾಗಿ ಜಗಳ ನಡೆದಿದ್ದು, ಆತ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಶವವನ್ನು ಟರ್ಪಲ್ ಸುತ್ತಿ ಕೆಲವು ಕಾಲ ಇರಿಸಿದ್ದ. ಬಳಿಕ ಲೋಹದ ಟ್ರಂಕ್ ಖರೀದಿಸಿ ಅದರಲ್ಲಿ ಆ ಹೆಣವನ್ನಿಟ್ಟು ಸುಟ್ಟು ಹಾಕಿದ್ದ. ಅದಾದ ನಂತರ ಆ ಭಸ್ಮವನ್ನು ನದಿಗೆ ಎಸೆಯುವ ಮೂಲಕ ಕೊಲೆಯ ಯಾವ ಕುರುಹು ಸಹ ಇದರಂತೆ ಮಾಡಲು ಪ್ರಯತ್ನ ನಡೆಸಿದ್ದ.
ಆದರೆ ಎಷ್ಟೇ ಬುದ್ಧಿವಂತನಾದರೂ ಒಂದೇ ಒಂದು ಕುರುಹನ್ನಾದರೂ ಉಳಿಸುತ್ತಾನೆ ಎಂಬಂತೆ ಈ ಪ್ರಕರಣದಲ್ಲೂ ಅದೇ ನಡೆದಿದೆ. ರಾಮ್ ಸಿಂಗ್ ಆಕೆಯ ಶವವನ್ನು ಸುಟ್ಟ ಟ್ರಂಕ್ ಅನ್ನು ತನ್ನ ಮಗನ ಸಹಾಯದಿಂದ ಬಾಡಿಗೆ ವಾಹನವೊಂದರಲ್ಲಿ ಎರಡನೇ ಪತ್ನಿಯ ಮನೆಗೆ ಸಾಗಿಸಲು ಯತ್ನಿಸಿದ್ದ. ಈ ವೇಳೆ ಆ ಟ್ರಂಕ್‌ನಿಂದ ದ್ರವ ಸೋರಿಕೆಯಾಗುತ್ತಿದ್ದುದನ್ನು ಡ್ರೈವರ್ ನೋಡಿದ್ದಾನೆ. ಅನುಮಾನಗೊಂಡ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಅದರಂತೆ ಪೊಲೀಸರು ಟ್ರಂಕ್ ಅನ್ನು ತಪಾಸಣೆಗೆ ಒಳಪಡಿಸಿದ್ದು, ಶವ ಸುಟ್ಟ ಕುರುಹುಗಳು ಪತ್ತೆಯಾಗಿವೆ.
ಪೊಲೀಸರು ರಾಮ್ ಸಿಂಗ್‌ನನ್ನು ಪ್ರಶ್ನೆ ಮಾಡಿದ್ದು, ಈ ವೇಳೆ ಆತ ಮಾಡಿದ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
























