ಶಾಂತಿಗೋಡು ಒಕ್ಕಲಿಗ ಗೌಡ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ರಕ್ತದಾನ ಶಿಬಿರ

ಪುತ್ತೂರು: ಶಾಂತಿಗೋಡು ಒಕ್ಕಲಿಗ ಗೌಡ ಮಾತೃ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘಗಳ ಜಂಟಿ ಆಶ್ರಯದಲ್ಲಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಸಹಯೋಗದೊಂದಿಗೆ ವಾರ್ಷಿಕ ಮಹಾಸಭೆ ಮತ್ತು ರಕ್ತದಾನ ಶಿಬಿರವು ಜನವರಿ 18ರಂದು ಜಗದೀಶ್ ಗೌಡ ಬಜಪ್ಪಾಳ ಅವರ ಗೃಹದಲ್ಲಿ ಜರುಗಿತು.

ಸಮಾಜ ಸೇವೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ರಕ್ತದಾನ ಶಿಬಿರದಲ್ಲಿ ಗೌಡ ಸಮಾಜ ಬಾಂಧವರು ಪಾಲ್ಗೊಂಡು ರಕ್ತದಾನ ಮಾಡಿದರು.

ಕಾರ್ಯಕ್ರಮವನ್ನು ತುಂಗಮ್ಮ ಬಜಪ್ಪಾಳ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.





















































 
 

ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಮೋಹನ್ ಗೌಡ ಪಾದೆ ಅವರು, “ಊರಿನ ಗೌಡ ಸಮಾಜ ಹಾಗೂ ಸಂಘಟನೆಯ ಸರ್ವತೋಮುಖ ಏಳಿಗೆಗೆ ಪ್ರತಿಯೊಂದು ಮನೆಯ ಸಹಕಾರ ಮತ್ತು ಭಾಗವಹಿಸುವಿಕೆ ಅತ್ಯಂತ ಅಗತ್ಯ,” ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತೀಕ್ಷಾ, ಅನ್ವಿತ್ ಹಾಗೂ ಭವಿಷ್, ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ ಕೆ. ಕೈಂದಾಡಿ ಅವರನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಅತಿಥಿ ರಾಧಾಕೃಷ್ಣ ಇಟ್ಟಿಗುಂಡಿ ಮಾತನಾಡಿ, “ಗೌಡ ಸಮಾಜಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ನಮ್ಮ ಪೂರ್ವಜರು ವಿವಿಧ ರಾಜ್ಯಗಳನ್ನು ದಾಟಿ ಇಲ್ಲಿಗೆ ಬಂದು ನೆಲೆಸಿದವರು. ಇಂದು ನಾವು ಎಲ್ಲಾ ಜಾತಿ-ಧರ್ಮಗಳೊಂದಿಗೆ ಸೌಹಾರ್ದಯುತವಾಗಿ ಸಹಬಾಳ್ವೆ ನಡೆಸುತ್ತಿದ್ದೇವೆ,” ಎಂದರು.

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಮಾತನಾಡಿ, ಸಂಘಟನೆಯ ಶಕ್ತಿಯ ಬಗ್ಗೆ ಒತ್ತು ನೀಡಿದರು. ಸಂಘಟನೆಯು ಸದಾ ಕ್ರಿಯಾಶೀಲವಾಗಿರಬೇಕು ಹಾಗೂ ಮುಂಬರುವ ತಾಲೂಕು ಮಟ್ಟದ ಕ್ರೀಡಾಕೂಟದ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದು ಕೋರಿದರು.

ಶಾಂತಿಗೋಡು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಗಣೇಶ್ ಗೌಡ ಕೈಂದಾಡಿ ಮಾತನಾಡಿ, ಕೃಷಿ ಸಂಸ್ಕೃತಿಯೇ ನಮ್ಮ ಸಮಾಜದ ಜೀವಾಳವಾಗಿದ್ದು, ಇಂದು ನಮ್ಮವರು ವಿವಿಧ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಸಭೆಯಲ್ಲಿ ಪ್ರಮುಖರಾದ ಪ್ರಶಾಂತ್ ಕೆಮ್ಮಾಯಿ, ಕುಸುಮ ಕೃಷ್ಣನಗರ, ಅಮರನಾಥ ಗೌಡ ಬಪ್ಪಳಿಗೆ, ಚಿದಾನಂದ ಗೌಡ ಬಜಪ್ಪಾಳ, ಭಾರತಿ ಕಾಡಮನೆ, ನಾರಾಯಣ ಗೌಡ ಪಾದೆ, ದೇವಪ್ಪ ಗೌಡ ಓಲಾಡಿ, ಸಂದೀಪ್ ಗೌಡ ಕಕ್ವೆ, ಜ್ಯೋತಿ ಚೆನ್ನಪ್ಪ ಗೌಡ ಕಂರ್ಬಡ್ಕ, ಮೋಹನ್ ಗೌಡ ನಡುಬೈಲು ಸೇರಿದಂತೆ ಊರಿನ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ವಿನೋದ್ ಓಲಾಡಿ ವಾರ್ಷಿಕ ವರದಿ ವಾಚಿಸಿದರು. ವರುಣ್ ಓಲಾಡಿ ಅತಿಥಿಗಳನ್ನು ಸ್ವಾಗತಿಸಿದರು. ಲತಾ ಮೋಹನ್ ಗೌಡ ಪಾದೆ ಪ್ರಾರ್ಥಿಸಿದರು. ಜಯರಾಮ ಗೌಡ ಕುಕ್ಯಾನ, ಪದ್ಮನಾಭ ಗೌಡ ಕೈಂದಾಡಿ, ಚಿರಂಜೀವಿ ತೋಟ, ಹರೀಶ್ ಗೌಡ ಕಂರ್ಬಡ್ಕ ಹಾಗೂ ಶಿವಪ್ರಸಾದ್ ಕೈಂದಾಡಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಹಕರಿಸಿದರು. ಚಿತ್ರಕಲಾ ದಯಾನಂದ ತೋಟ ನಿರೂಪಿಸಿದರು. ಜ್ಯೋತಿ ಕಂರ್ಬಡ್ಕ ವಂದಿಸಿದರು

error: Content is protected !!
Scroll to Top