ಮಂಗಳೂರು: ಸುಲಿಗೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟಿದ್ದ ಬಳಿಕ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿ ತೊಕ್ಕೊಟ್ಟು ಚಂಬುಗುಡ್ಡೆ ನಿವಾಸಿ ನವೀನ್ ಸೀಕ್ವೆರಾ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಯ ಮೇಲೆ 2011 – 2012 ರಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ 2015 ರಲ್ಲಿ ಶಿಕ್ಷೆ ಪ್ರಕಟವಾಗಿತ್ತು. 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5000 ರೂ. ದಂಡವನ್ನು ವಿಧಿಸಿ ಕೋರ್ಟ್ ಆದೇಶ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದನು. ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಾಲಯ 15 ಸಾವಿರ ರೂ. ದಂಡ ಮತ್ತು ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಎಂಬ ಆದೇಶ ನೀಡಿತ್ತು. 2022 ರ ಒಳಗಾಗಿ ಶಿಕ್ಷೆ ಅನುಭವಿಸುವಂತೆ ಸೂಚಿಸಿತ್ತು. ಆರೋಪಿ ಶರಣಾಗದೇ ಹೋದಲ್ಲಿ ಜಿಲ್ಲಾ ನ್ಯಾಯಾಲಯ ಆದೇಶಿಸಿದ ಶಿಕ್ಷೆಯೇ ಜಾರಿಯಾಗುವ ಎಚ್ಚರಿಕೆಯನ್ನು ಸಹ ನೀಡಿತ್ತು.
ಆದರೆ ಶಿಕ್ಷೆ ಪ್ರಕಟವಾದ ಬಳಿಕ ಪೊಲೀಸರನ್ನು ಯಾಮಾರಿಸಿ ಆರೋಪಿ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ ಬಂಧನದ ವಾರಂಟ್ ಸಹ ಹೊರಡಿಸಲಾಗಿತ್ತು. ಸದ್ಯ ಆರೋಪಿಯನ್ನು ಸುರತ್ಕಲ್‌ನ ಹೊನ್ನಕಟ್ಟೆಯ ಬಾರ್ ಒಂದರಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 5000 ರೂ. ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
























